6 ದಿನಗಳಲ್ಲಿ 16 ನವಜಾತ ಶಿಶುಗಳ ಸಾವು, ತನಿಖೆಗೆ ಆದೇಶ

ಗುವಾಹತಿ: ಕಳೆದೊಂದು ವಾರದಲ್ಲಿ ಸುಮಾರು 16 ನವಜಾತ ಶಿಶುಗಳು ಅಸ್ಸಾಂನ ಜೊರ್ಹಾತ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.

ಶಿಶುಗಳ ಮರಣ ಪ್ರಕರಣ ಸುದ್ದಿಯಾಗುತ್ತಲೇ ಅಸ್ಸಾಂ ಸರ್ಕಾರ ಆಸ್ಪತ್ರೆಗೆ ವೈದ್ಯಕೀಯ ತಜ್ಞರನ್ನು ಕಳುಹಿಸಿದ್ದು, ಶಿಶುಗಳ ಸಾವಿನ ಬಗ್ಗೆ ತನಿಖೆಗೆ ಸೂಚಿಸಿದೆ.

ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್(UNICEF) ತಜ್ಞರು ಮತ್ತು ಗುವಾಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ವೈದ್ಯರು ಶಿಶುಗಳ ಸಾವಿನ ಕುರಿತು ತನಿಖೆ ಕೈಗೊಳ್ಳಲು ಜೊರ್ಹಾತ್‌ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ್‌ ಬಿಸ್ವಾ ತಿಳಿಸಿದ್ದಾರೆ.

ಆಸ್ಪತೆಯ ಪೀಡಿಯಾಟ್ರಿಕ್‌ ವಿಭಾಗದ ಮುಖ್ಯಸ್ಥ ಬಿಸ್ವನಾಥ್‌ ಪ್ರತಿಕ್ರಿಯಿಸಿ, ನಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟ ಹೆಚ್ಚಿನ ಮಕ್ಕಳು ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದವು. ಕೆಲವು ಮಕ್ಕಳ ತಾಯಂದಿರು ಆಸ್ಪತ್ರೆಗೆ ನಿಧಾನವಾಗಿ ದಾಖಲಾಗಿದ್ದರಿಂದಾಗಿ ಸಾವು ಸಂಭವಿಸಿವೆ. ಇನ್ನು ಕೆಲವು ಜನಿಸುತ್ತಲೇ ಅನಾರೋಗ್ಯ ಮತ್ತು ವಂಶವಾಹಿ ಸಮಸ್ಯೆಗಳಿಂದ ಮೃತಪಟ್ಟಿವೆ. ಅಲ್ಲದೆ, 40 ಮಕ್ಕಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವಿರುವ ಮಕ್ಕಳ ವಿಭಾಗದಲ್ಲಿ ಸುಮಾರು 84 ಪ್ರಕರಣಗಳು ಪ್ರವೇಶ ಪಡೆದಿದ್ದವು. ಇದರಿಂದಾಗಿ ಮಾನವಶಕ್ತಿ ಕೊರತೆ ಉಂಟಾಗಿರಬಹುದು. ಹೀಗಿದ್ದರೂ ಮಕ್ಕಳನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ ಎಂದು ಸ್ಪಷ್ಟೀಕರಿಸಿದ್ದಾರೆ.

ಸ್ಥಳೀಯರು ಮತ್ತು ಪಾಲಕರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ನವಜಾತ ಶಿಶುಗಳ ಮರಣಕ್ಕೆ ಕಾರಣ ಎಂದು ಆರೋಪಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. (ಏಜೆನ್ಸೀಸ್)