157 ಮಂದಿ ಗೋಕಳ್ಳರ ಪೆರೇಡ್

ಉಡುಪಿ: ಜಿಲ್ಲೆಯಲ್ಲಿ ಗೋಕಳ್ಳತನ ಹಾಗೂ ಅಕ್ರಮ ಗೋಸಾಟ ಪ್ರಕರಣಗಳಲ್ಲಿ ಭಾಗಿಯಾದ 157 ಮಂದಿ ಹಳೇ ಆರೋಪಿಗಳ ಉಪವಿಭಾಗವಾರು ಪೆರೇಡ್ ಸೋಮವಾರ ನಡೆಸಲಾಯಿತು.

ಕುಂದಾಪುರ ರಕ್ತೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಪೆರೇಡ್ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ಅಕ್ರಮ ಗೋಸಾಗಾಟ, ಕಳ್ಳತನ ಮುಂದುವರೆಸಿದಲ್ಲಿ ಗಡಿಪಾರು ಅಥವಾ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಕುಂದಾಪುರದಿಂದ 15 ಮಂದಿ, ಗ್ರಾಮಾಂತರದಿಂದ 14 ಮಂದಿ, ಬೈಂದೂರಿನಿಂದ 6 ಮಂದಿ, ಶಂಕರನಾರಾಯಣದಿಂದ ಐವರು, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ತಲಾ 4 ಮಂದಿ ಹಾಗೂ ಅಮಾಸೆಬೈಲು ಠಾಣಾ ವ್ಯಾಪ್ತಿಯಿಂದ ಇಬ್ಬರು ಸೇರಿದಂತೆ ಒಟ್ಟು 50 ಮಂದಿ ಆರೋಪಿಗಳು ಹಾಜರಿದ್ದರು. ಕುಂದಾಪುರ ಪೊಲೀಸ್ ಉಪವಿಭಾಗಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಉಡುಪಿ ಉಪವಿಭಾಗದಲ್ಲಿ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಪೆರೇಡ್ ನಡೆಸಲಾಯಿತು. ಕೋಟ 11, ಹಿರಿಯಡ್ಕ 10, ಮಲ್ಪೆ 7 ಹಾಗೂ ಬ್ರಹ್ಮಾವರ ಠಾಣಾ ಸರಹದ್ದಿನಿಂದ ನಾಲ್ವರು ಸೇರಿದಂತೆ ಒಟ್ಟು 32 ಮಂದಿ ಹಳೇ ಆರೋಪಿಗಳು ಹಾಜರಿದ್ದರು.

ಕಾರ್ಕಳ ಪೊಲೀಸ್ ಉಪವಿಭಾಗ ಕಚೇರಿ ಮುಂಭಾಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಪೊಲೀಸ್ ಉಪವಿಭಾಗಾಧಿಕಾರಿ ಪಿ.ಕೃಷ್ಣಕಾಂತ್ ಉಪಸ್ಥಿತಿಯಲ್ಲಿ ಪರೇಡ್ ನಡೆಯಿತು. ಕಾರ್ಕಳ ನಗರದಿಂದ 7, ಗ್ರಾಮಾಂತರದಿಂದ 14, ಹೆಬ್ರಿಯಿಂದ 15, ಅಜೆಕಾರಿನಿಂದ 8, ಕಾಪುವಿನಿಂದ 9, ಪಡುಬಿದ್ರಿಯಿಂದ 10 ಹಾಗೂ ಶಿರ್ವ ಠಾಣಾ ವ್ಯಾಪ್ತಿಯಿಂದ 12 ಮಂದಿ ಸಹಿತ ಒಟ್ಟು 75 ಮಂದಿ ಆರೋಪಿಗಳು ಹಾಜರಿದ್ದರು.

ಗೋಕಳ್ಳತನ, ಅಕ್ರಮ ಗೋಸಾಗಾಟ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ತಾಲೂಕು ದಂಡಾಧಿಕಾರಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಸನ್ನಡತೆಗಾಗಿ ಅಧಿಕ ಮೊತ್ತದ ಬಾಂಡ್ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ಠಾಣಾವಾರು ಪೆರೇಡ್ ನಡೆಸಲಾಗಿತ್ತು.
– ನಿಶಾ ಜೇಮ್ಸ್, ಉಡುಪಿ ಎಸ್ಪಿ

Leave a Reply

Your email address will not be published. Required fields are marked *