ಬೆಂಗಳೂರು ವ್ಯಾಪ್ತಿಯ 3 ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ ಪೂರ್ಣ: ಮತ ಎಣಿಕೆಗಾಗಿ 1500 ಸಿಬ್ಬಂದಿ ನಿಯೋಜನೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಮತ ಎಣಿಕೆಗಾಗಿ 1500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ನಗರ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್ ತಿಳಿಸಿದ್ದಾರೆ.

ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್​ ಪ್ರಸಾದ್​ ಮೌಂಟ್​ ಕಾರ್ಮಲ್​, ಎಸ್​ಎಸ್​ಎಂಆರ್​ವಿ ಮತ್ತು ಸೇಂಟ್​ ಜೋಸೆಫ್​ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರದ 100 ಮೀ. ಒಳಗೆ ಮೊಬೈಲ್​ ಬಳಕೆ ನಿಷೇಧಿಸಲಾಗಿದೆ. ಹಾಗೂ ಮತ ಎಣಿಕೆ ಕೇಂದ್ರದೊಳಗೂ ಮೊಬೈಲ್​ ಬಳಕೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದೊಂದು ವಿಧಾನಸಭೆ ಕ್ಷೇತ್ರಕ್ಕೆ 14 ಟೇಬಲ್​ಗಳನ್ನು ಹಾಕಲಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ, ಕೆ.ಆರ್​.ಪುರ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರಗಳಿಗೆ ಹೆಚ್ಚಿನ ಟೇಬಲ್​ ಹಾಕಲಾಗಿದೆ. ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್​ ರೂಂಗಳನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುವುದು. ಕೌಂಟಿಂಗ್​ ಹಾಲ್​ನೊಳಗೆ ಕಡ್ಡಾಯವಾಗಿ ಐಡಿ ಕಾರ್ಡ್​ಗಳನ್ನು ಧರಿಸಬೇಕು. ಮತ ಎಣಿಕೆ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗುವುದು. ವಿಡಿಯೋದ ಸಿಡಿಯನ್ನು ಪ್ರತಿ ಅಭ್ಯರ್ಥಿಗೂ ನೀಡಲಾಗುವುದು ಎಂದು ಮಂಜುನಾಥ್​ ಪ್ರಸಾದ್ ತಿಳಿಸಿದರು.

ಮೇ 23 ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಮತ್ತು ಸೆಕ್ಷನ್​ 144 ಜಾರಿಗೊಳಿಸಲಾಗುವುದು. ಮಂಡ್ಯ ಮತ್ತು ಹಾಸನಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುವುದು. ಮಂಡ್ಯ ಜಿಲ್ಲೆಗೆ ನಾಲ್ವರು ಡಿವೈಎಸ್​ಪಿಗಳು ಹಾಗೂ 10 ಇನ್ಸ್​ಪೆಕ್ಟರ್​ಗಳನ್ನು ನಿಯೋಜಿಸಲಾಗುವುದು. ಹಾಸನ ಜಿಲ್ಲೆಗೆ ನಾಲ್ವರು ಡಿವೈಎಸ್​ಪಿಗಳು, 6 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ನಿಯೋಜಿಸಲಾಗುವುದು ಮತ್ತು ಸಿಐಡಿ ಘಟಕದಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮಂಡ್ಯ ಮತ್ತು ಹಾಸನಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಜಿಲ್ಲಾ ಕೇಂದ್ರದಲ್ಲಿ ಮೇ 22 ತಂದು ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *