ಮಹಾನಗರ ವಿಕಾಸಕ್ಕೆ 150 ಕೋಟಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಅನುದಾನ ಕೊರತೆಯಿಂದ ಬಳಲಿ ಬೆಂಡಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೊಷಿಸಿದ್ದಾರೆ. ಪ್ರಸ್ತುತ ರಾಜ್ಯ ಮುಂಗಡಪತ್ರದಲ್ಲಿ ಧಾರವಾಡ ಜಿಲ್ಲೆಗೆ ಸಿಕ್ಕಿರುವ ಅತಿದೊಡ್ಡ ಯೋಜನೆ ಇದು.

ಉಳಿದಂತೆ ಮುಂಗಡಪತ್ರದ ‘ನಿರ್ದಿಷ್ಟ ಯೋಜನೆ’ಗಳು ಅಲ್ಲೊಂದು ಇಲ್ಲೊಂದು ಎಂಬಂತೆ ಸಿಕ್ಕಿದ್ದು, ತಕ್ಕಮಟ್ಟಿಗೆ ಸಮಾಧಾನ ಪಡಬಹುದಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಹು-ಧಾ ಮಹಾನಗರ ಪಾಲಿಕೆಗೆ 100 ಕೋಟಿ ರೂ.ಗಳ ವಾರ್ಷಿಕ ಪ್ಯಾಕೇಜ್ ನೀಡುವ ಮೂಲಕ ಸ್ಥಳೀಯವಾಗಿ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಮುಂದೆ ಈ ಪ್ಯಾಕೇಜ್ ಉಳಿದ ಮಹಾನಗರ ಪಾಲಿಕೆಗಳಿಗೂ ದೊರೆತಿದ್ದನ್ನು ಸ್ಮರಿಸಬಹುದು. ಇಂಥ ಪ್ಯಾಕೇಜ್​ಗಳಲ್ಲಿ ಸರ್ಕಾರ ಒಂದೇ ಸಲಕ್ಕೇನೂ ಅನುದಾನ ನೀಡುವುದಿಲ್ಲ. ಅಷ್ಟೇ ಅಲ್ಲ, ಅನುದಾನ ಬಳಕೆಗೆ ಕಾಲಮಿತಿಯೂ ಇರುವುದಿಲ್ಲವಾದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯ ತಾಂತ್ರಿಕ ಕಾರಣಗಳ ನೆವ ಹೇಳುತ್ತ ಕೆಲಸ ಕುಂಟುತ್ತ ಸಾಗುವ ಅಪಾಯವಿದೆ.

ಮಾವು ಸಂಸ್ಕರಣೆ: ಧಾರವಾಡ ಜಿಲ್ಲೆ ಉತ್ತಮ ಮಾವು ಬೆಳೆಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರ ಸಹಯೋಗದಲ್ಲಿ ಮಾವು ಉತ್ಪಾದನಾ, ಸಂಸ್ಕರಣಾ ಘಟಕ ಸ್ಥಾಪನೆ ಭರವಸೆ ನೀಡಿದೆ. ಇದೊಂದು ಸ್ವಾಗತಾರ್ಹ ಯೋಜನೆ. ಖಾಸಗಿಯವರ ಸಹಭಾಗಿತ್ವ ಪಡೆಯುವುದರಿಂದ ಯಶಸ್ವಿಯಾಗಲು ಸಾಧ್ಯವಿದೆ.

ಸಕಾಲಿಕ ನೆರವು: ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ತೃತೀಯ ಹಂತದ ಕ್ಯಾನ್ಸರ್ ಕೇಂದ್ರಕ್ಕಾಗಿ 4.5 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಘೊಷಿಸಿದ್ದಾರೆ. ಖ್ಯಾತ ಶಸ್ತ್ರಚಿಕಿತ್ಸಕ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರು ಬಹಳ ಮುಂದಾಲೋಚನೆಯಿಂದ ಸ್ಥಾಪಿಸಿದ ಉತ್ತರ ಕರ್ನಾಟಕದ ಮೊದಲ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಇದಾಗಿದ್ದು, ಸರ್ಕಾರದ ನೆರವು ಕೇಂದ್ರದ ಅಭಿವೃದ್ಧಿಗೆ, ತನ್ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಅನುಕೂಲವಾಗಲಿದೆ.

ಅವಳಿ ನಗರಕ್ಕೆ ಮೆಟ್ರೋ ಕನಸು:ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿಗೆ ಮೋನೊ ರೈಲು ಬರುತ್ತದೆ ಎಂದು ಆಸೆ ಹುಟ್ಟಿಸಲಾಗಿತ್ತು. ಖಾಸಗಿ ಕಂಪನಿಯವರು ಬಂದು ಸಮೀಕ್ಷೆ ಮಾಡಿ, ಕಾರ್ಯಸಾಧುವಲ್ಲ ಎಂದು ಕೈಬಿಟ್ಟಿದ್ದು ಹಳೆಯ ಕತೆ. ಸಮ್ಮಿಶ್ರ ಸರ್ಕಾರ ಮೆಟ್ರೋ ರೈಲಿನ ಕನಸು ತೋರಿಸಿದೆ. ಬಿಜೆಪಿ ಸರ್ಕಾರ ಮಂಜೂರು ಮಾಡಿದ (ಹಣದ ಕೊರತೆ ಇಲ್ಲದ) ಬಿಆರ್​ಟಿಎಸ್ ಯೋಜನೆ ಘೊಷಣೆಯಾದ ಬಳಿಕ ಕುಂಟುತ್ತ ಸಾಗಿ ಸದ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ ಚಿಗರಿ ಬಸ್​ಗಳು ಓಡಲಾರಂಭಿಸಿವೆ. ಮೂಲ ನೀಲನಕ್ಷೆಯಂತೆ ದೇವಸ್ಥಾನ, ಪ್ರಾರ್ಥನಾ ಮಂದಿರ ತೆರವುಗೊಳಿಸಲೂ ತಕರಾರು ಮಾಡುವ ಜನ ಹುಬ್ಬಳ್ಳಿಯಲ್ಲಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀಲನಕ್ಷೆಯಂತೆ ಕೆಲಸ ಮಾಡುವ ಕಾಳಜಿ ಸರ್ಕಾರಕ್ಕೂ, ಅಧಿಕಾರಿಗಳಿಗೂ ಇಲ್ಲ ಎನ್ನುವುದು ಸಾಬೀತಾಗಿದೆ. ಹೀಗಿರುವಾಗ, ಮೆಟ್ರೋ ರೈಲಿನ ಪ್ರಸ್ತಾಪ- ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.

ಆಲೂರು ವೆಂಕಟರಾವ್ ನೆನಪು:ಕನ್ನಡದ ಕಟ್ಟಾಳು ಆಲೂರು ವೆಂಕಟರಾವ್ ಹೆಸರಿನ ಭಾಷಾ ಕೌಶಲ ತರಬೇತಿ ಸಂಸ್ಥೆಯನ್ನು ಕಂದಾಯ ವಿಭಾಗಕ್ಕೊಂದರಂತೆ ಸ್ಥಾಪಿಸಲು ಹೊರಟಿರುವುದು ಸ್ವಾಗತಾರ್ಹವೇ. ಸ್ಥಳ ಇನ್ನು ಮೇಲೆ ನಿಗದಿಯಾಗಬೇಕಿದೆ. ಇದನ್ನು ಆಲೂರರ ಕರ್ಮಭೂಮಿಯಾದ ಧಾರವಾಡಕ್ಕೇ ಮಂಜೂರಿ ಮಾಡಿಸಿಕೊಂಡು ಬರುವ ಹೊಣೆಗಾರಿಕೆ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಇದೆ.

ಧಾರವಾಡ ಜಿಲ್ಲೆಗೆ ವಸತಿ ಶಾಲೆ:ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಧಾರವಾಡ ಜಿಲ್ಲೆಗೂ ಸಿಕ್ಕಿದೆ. ಶಿಕ್ಷಣ ಎಲ್ಲರ ಹಕ್ಕು ಎಂದು ಘೊಷಣೆಯಾಗಿದ್ದು, ಸಾಕಷ್ಟು ಸಂಖ್ಯೆಯ ಸರ್ಕಾರಿ-ಖಾಸಗಿ ಶಾಲೆಗಳೂ ಇವೆ. ಮುಸ್ಲಿಂ ಹೆಣ್ಣು ಮಕ್ಕಳನ್ನಷ್ಟೇ ಒಂದು ಕಡೆ ಉಳಿಸಿ ಶಿಕ್ಷಣ ನೀಡುವ ಸರ್ಕಾರದ ಚಿಂತನೆ ಹೊಸದು. ಇದಕ್ಕೆ ಸಮುದಾಯದ ಸ್ಪಂದನೆ ಹೇಗಿರುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ಮೋಜಣಿ ಮಾತು:ಡ್ರೋಣ್ ಮೂಲಕ ಭೂ ಮೋಜಣಿ ಯೋಜನೆ ಯಲ್ಲಿ ಧಾರವಾಡ ಜಿಲ್ಲೆಯೂ ಪ್ರಸ್ತಾಪವಾಗಿದೆ. ಇದು ಆಧುನಿಕ ತಂತ್ರಜ್ಞಾನ ಬಳಕೆಯ ಉದ್ದೇಶದಿಂದ ಕೂಡಿದೆಯಾದರೂ, ಜಾರಿ ಸುಲಭವಲ್ಲ. ಡ್ರೋಣ್ ಹಾರಿಸುವುದು ಯಾವ ದೊಡ್ಡ ಕೆಲಸವೂ ಅಲ್ಲ. ಅದು

ಸೆರೆಹಿಡಿದ ಚಿತ್ರವನ್ನು ಬ್ರಿಟಿಷರ ಕಾಲದಲ್ಲಿ ತಯಾರಿಸ ಲಾದ ಮೂಲ ನಕಾಶೆಗೆ ಹೋಲಿಸಿ, ಕರಾರುವಾಕ್ ವಿಶ್ಲೇಷಣೆ ನಡೆಸಿ ಅಂತಿಮ ತೀರ್ಮಾನ ನೀಡುವುದು, ಹೊಸ ಡಿಜಿಟಲ್ ನಕಾಶೆ ತಯಾರಿಸುವುದು ಬಹುದೊಡ್ಡ

ಸವಾಲಿನ ಕೆಲಸ. ಸರ್ಕಾರ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿ, ಭೂ ಮೋಜಣಿ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಕೆಲಸ ಮಾಡಬೇಕು. ದುರ್ದೈವದ ಸಂಗತಿ ಎಂದರೆ, ಸರ್ವೆ ಇಲಾಖೆಯಲ್ಲಿ ದಕ್ಷ ಮೇಲಧಿಕಾರಿಗಳು (ಧಾರವಾಡ ಜಿಲ್ಲೆಯಲ್ಲಿ) ಇಲ್ಲ. ಇದೇ ಕಾರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಘೊಷಿಸಿದ್ದ ಯುಪಿಒಆರ್ ಯೋಜನೆ ವಿಫಲವಾಗಿದೆ. ಅಸ್ಥಿರ ಸಮ್ಮಿಶ್ರ ಸರ್ಕಾರದ ‘ಡ್ರೋಣ್ ಮೂಲಕ ಭೂ ಮೋಜಣಿ’ ಎಂಬ ಒಳ್ಳೆಯ ಯೋಜನೆಯ ಕತೆಯೂ ಹಾಗೇ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹು-ಧಾ ಪಾಲಿಕೆ ಜಿಯೊ ಸರ್ವೆಗೆ ಪ್ರಸ್ತಾವ ಸಿದ್ಧಪಡಿ ಸಿದ್ದು, ಇದಕ್ಕೆ ಸರ್ಕಾರ ಆರ್ಥಿಕ ಬೆಂಬಲ ನೀಡಿದ್ದರೆ ಕಡೇ ಪಕ್ಷ ನಗರ ಪ್ರದೇಶದಲ್ಲಾದರೂ ವ್ಯವಸ್ಥಿತ ಮೋಜಣಿ, ನಕಾಶೆ ಸಿದ್ಧವಾಗುತ್ತಿತ್ತು. ಸರ್ಕಾರಿ ಜಾಗ ಅತಿಕ್ರಿಮಿಸಿಕೊಂಡವರ ಹೂರಣ ಹೊರಗೆ ಬರುತ್ತಿತ್ತು.

ವಾಕರಸಾ ಸಂಸ್ಥೆ ನಿರ್ಲಕ್ಷ್ಯ:ನಷ್ಟದಲ್ಲೇ ಇರುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಬಿಜೆಪಿ ಸರ್ಕಾರ ಇದ್ದಾಗ ವಾಹನ ತೆರಿಗೆ ರಿಯಾಯಿತಿ ಮೂಲಕ ನೆರವಾಗಿತ್ತು. ಅದನ್ನೇ ಇನ್ನೂ ಐದು ವರ್ಷ ಮುಂದುವರಿಸಬೇಕು ಎಂದು ಕಾರ್ವಿುಕ ಸಂಘದವರು, ಜನಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಈ ಬೇಡಿಕೆಯನ್ನು ನಿರ್ಲಕ್ಷಿಸಿದೆ.

ತಾಲೂಕಿನ ಕೆರೆಗಳಿಗೆ ನೀರು: ಕುಂದಗೋಳ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು 40 ಕೋಟಿ ರೂ. ಭರವಸೆ ನೀಡಿದೆ. ಇದು ಸಚಿವ ಸಿ.ಎಸ್. ಶಿವಳ್ಳಿಯವರ ಪ್ರಯತ್ನದ ಫಲ ಎನ್ನಬಹುದು. ಮಲಪ್ರಭಾ ಕಾಲುವೆ ನೀರು ಕುಂದಗೋಳ ತಾಲೂಕಿಗೆ ಸಿಗುವುದಿಲ್ಲ. ಬೆಣ್ಣೆ ಹಳ್ಳ ಮತ್ತು ಇತರ ಚಿಕ್ಕ ಹಳ್ಳಗಳೇ ನೀರಿನ ಮೂಲ. ಹಿಂದಿನವರು ನಿರ್ವಿುಸಿದ ಕೆರೆಗಳು ಚೆನ್ನಾಗಿ ಮಳೆ ಬಂದರೆ ಸಹಜವಾಗಿಯೇ ತುಂಬುತ್ತವೆ. ಮಳೆಯಾದರೆ ಸರ್ಕಾರದ ದುಡ್ಡಿನ ಅಗತ್ಯ ಬರುವುದಿಲ್ಲ; ಆಗ 40 ಕೋಟಿ ರೂ. ಏನಾಗುತ್ತದೆ? ಕೆರೆಗೆ ನೀರಿನ ಹೆಸರಿನಲ್ಲಿ ‘ಕೆರೆಗೆ ಹಾರ’ದಂತಾಗದಿದ್ದರೆ ಸಾಕು!

ಕೆಲ ತಾಲೂಕಿಗೆ ಏನೂ ಇಲ್ಲ:ನಿರ್ದಿಷ್ಟ/ವಿಶೇಷ ಯೋಜನೆಗಳ ವಿಷಯದಲ್ಲಿ ಧಾರವಾಡ, ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ ಪ್ರಸ್ತಾಪವಾಗಿವೆ. ಆದರೆ, ಕಲಘಟಗಿ, ನವಲಗುಂದ, ಅಳ್ನಾವರ ತಾಲೂಕಿಗೆ ನೇರವಾಗಿ ಸಿಗುವಂಥದ್ದೇನೂ ಇಲ್ಲ. ಸರ್ಕಾರದ ಸಾಮಾನ್ಯ ಯೋಜನೆಗಳೇ ಗತಿಯಾಗಿವೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ತಾಲೂಕುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಕಾಲಮಿತಿಯ ಭರವಸೆಗಳೂ ದೊರಕಿಲ್ಲ.