More

    150 ಸ್ಥಾನ ಗೆಲ್ಲಲು ಆಶೀರ್ವದಿಸಿ

    ಗೋಣಿಕೊಪ್ಪ: ಜಿಲ್ಲೆಯ ಇಬ್ಬರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ರಾಜ್ಯದಲ್ಲಿ 150 ಸ್ಥಾನ ಗೆಲ್ಲಲು ಆಶೀರ್ವದಿಸಿ ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾ ಶರ್ಮಾ ಮನವಿ ಮಾಡಿದರು.


    ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಮಾಧ್ಯಮ ಶಾಲಾ ಮೈದಾನದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ರಾಜ್ಯದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆ. ಇದನ್ನು ಮನಗಂಡು ಮತ ಹಾಕುವ ಮೂಲಕ ಬಹುಮತದ ಸರ್ಕಾರ ಆಡಳಿತಕ್ಕೆ ಬರುವಂತಾಗಬೇಕು. ಬಿಜೆಪಿ ಪ್ರಣಾಳಿಕೆ ಕೂಡ ಅಭಿವೃದ್ಧಿ ಚಿಂತನೆಯಲ್ಲಿದೆ ಎಂದರು.


    ದೇಶ ಪರಿವರ್ತನೆಯಾಗುವುದರ ಮೂಲಕ ವಿಶ್ವ ಗುರು ಹಂತದಲ್ಲಿರುವುದರಿಂದ ನರೇಂದ್ರ ಮೋದಿಗೆ ಹಾಕುವ ಮತವನ್ನು ಬಿಜೆಪಿ ಮೂಲಕ ಬೆಂಬಲಿಸಬೇಕಿದೆ. ದೇಶದಲ್ಲಿ ಭ್ರಷ್ಟ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಜಿಲ್ಲೆಯಲ್ಲಿ ಎರಡು ಸ್ಥಾನಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿರೂ ಬಿಜೆಪಿ ಆಡಳಿತ ಜನಪರವಾಗಿ ನಡೆದುಕೊಂಡಿದೆ. ಮತ್ತೆ ಅಧಿಕಾರ ನೀಡಬೇಕಿದೆ ಎಂದರು.


    ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಕಡಿತಗೊಳಿಸಿರುವುದನ್ನು ವಿರೋಧಿಸಿ, ಸರ್ಕಾರ ಬಂದರೆ ಮತ್ತೆ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿದೆ. ದೇಶದಲ್ಲಿ ಹಿಂದುಗಳು, ಜೈನರು, ಬುದ್ಧರು, ಕ್ರಿಶ್ಚಿಯನ್ನರು ಕೂಡ ತೆರಿಗೆ ಪಾವತಿಸುತ್ತಾರೆ. ಆದರೆ, ಇವರಿಗೆ ಮಾತ್ರ ಮೀಸಲಾತಿ ನೀಡುವುದು ಎಷ್ಟು ಸರಿ. ಕಾಂಗ್ರೆಸ್ ಪಕ್ಷ ಮುಸ್ಲಿಂ ಪಕ್ಷವಾಗಿ ಮುನ್ನಡೆಯುತ್ತಿದೆ. ದೇಶ ದ್ರೋಹ ಕೃತ್ಯದಲ್ಲಿರುವ ಪಿಎಫ್‌ಐಗೆ ಬೆಂಬಲವಾಗಿ ನಿಂತಿದೆ. ಕೊಡಗು ಜಿಲ್ಲೆ ಕೂಡ ಸ್ಲೀಪರ್ ಸೆಲ್ ಆಗಿ ಮಾರ್ಪಾಡು ಆಗುತ್ತಿರುವುದು ಭಯಾನಕ ವಿಚಾರ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ದೇಶವನ್ನು ರಕ್ಷಿಸಬೇಕಿದೆ. ಟಿಪ್ಪು ಜಯಂತಿ ಮೂಲಕ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮುಸ್ಲಿಂ ಪಕ್ಷ ಎಂಬುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಟಿಪ್ಪು ಜಯಂತಿ ಆಚರಿಸಿಕೊಳ್ಳಲಿ ಎಂದರು.


    ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಜಿಲ್ಲೆಯ ಬೆಳೆಗಾರರ ಜಮ್ಮಾ ಬಾಣೆ ಸಮಸ್ಯೆ, ಅತಿವೃಷ್ಟಿ, ರಸ್ತೆ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಪರಿಹಾರ ಕಂಡುಕೊಂಡಿದೆ. ವನ್ಯಪ್ರಾಣಿಗಳಿಂದ ಆಗುವ ನಷ್ಟಕ್ಕೆ ನೀಡುವ ಪರಿಹಾರವನ್ನು ಹೆಚ್ಚಿಸಿದೆ. ವನ್ಯಪ್ರಾಣಿ ನಿಯಂತ್ರಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಆದ್ದರಿಂದ ಮತ್ತೆ ಬಿಜೆಪಿ ಸರ್ಕಾರ ಬಹುಮತದಿಂದ ಆಡಳಿತಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಜಾತಿ ಆಧಾರದಲ್ಲಿ ಮತ ಕೇಳುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದರು.


    ಪುಷ್ಪಾರ್ಚನೆ: ಕಾವೇರಿ ಕಾಲೇಜು ಮೈದಾನದಲ್ಲಿನ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಡಾ.ಹಿಮಂತ್ ಬಿಸ್ವಾ ಶರ್ಮಾ ಅವರು ಆವರಣದಲ್ಲಿರುವ ಫೀ.ಮಾ. ಕೆ. ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ವೇದಿಕೆಗೆ ಆಗಮಿಸಿ, ಭಾರತಾಂಬೆಗೆ ಪುಷ್ಪ ನಮನ ಸಲ್ಲಿಸಿದರು.


    ಕೊಡವ ಭಾಷೆಯಲ್ಲಿ ಭಾಷಣ: ಕೊಡವ ಭಾಷೆಯಲ್ಲಿ ಮಾತು ಆರಂಭಿಸಿ ಗಮನ ಸೆಳೆದರು. ಕೊಡಗ್ ಮಾಜನಕ್ ನಾಡ ನಮಸ್ಕಾರ. ಕುಲದೇವಿ ಕಾವೇರಿ, ಇಗ್ಗುತ್ತಪ್ಪನ ಪ್ರಾರ್ಥನೆ ಮಾಡಿಯಂಡ್ ದಂಡ್ ಮಹಾನ್ ಸೇನಾಧಿಕಾರಿಯಳಾನ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಗೇನ ಮಾಡಿಯಂಡ್, ದಂಡ್ ತಕ್ಕ್ ಪರಿಯುವಿ. (ಮಾಜನರಿಗೆ ನನ್ನ ನಮಸ್ಕಾರಗಳು . ಕುಲದೇವಿ ಕಾವೇರಿ, ಇಗ್ಗುತ್ತಪ್ಪ ದೇವರನ್ನು ಪ್ರಾರ್ಥಿಸಿಕೊಂಡು, ಎರಡು ಮಹಾನ್ ಸೇನಾಧಿಕಾರಿಗಳಾದ ಫೀ. ಕೆ. ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರನ್ನು ಸ್ಮರಿಸಿಕೊಂಡು ಮಾತು ಆರಂಭಿಸುತ್ತೇನೆ.) ಎಂದು ಸ್ಥಳೀಯರ ಮನ ಸೆಳೆದರು.
    ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಚುನಾವಣಾ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಪ್ರಮುಖರಾದ ರೀನಾ ಪ್ರಕಾಶ್, ನಾಪಂಡ ರವಿ ಕಾಳಪ್ಪ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ವಾಟೇರಿರ ಬೋಪಣ್ಣ, ಅಜ್ಜಿಕುಟ್ಟೀರ ಪ್ರವೀಣ್, ಕಾಂಗೀರ ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts