More

    ಮೊದಲ ದಿನ 14 ಮಂದಿ ಹೇಳಿಕೆ ದಾಖಲು

    ಮಂಗಳೂರು: ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್ ಕುರಿತ ಮ್ಯಾಜಿಸ್ಟೀರಿಯಲ್ ವಿಚಾರಣೆ ಮಂಗಳೂರಿನಲ್ಲಿ ಮಂಗಳವಾರ ಆರಂಭಗೊಂಡಿದೆ.

    ನಗರದ ಮಿನಿವಿಧಾನಸೌಧದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಚಾರಣೆ ಕೈಗೊಂಡರು. ಮೂರು ತಿಂಗಳ ಕಾಲ ನಡೆಯಲಿರುವ ವಿಚಾರಣೆಯಲ್ಲಿ ಮಂಗಳವಾರ ಸಾರ್ವಜನಿಕರಿಂದ ವಿವರ ಪಡೆಯಲಾಯಿತು. ಮೊದಲ ದಿನ 11ರಿಂದ 1.30ರ ವರೆಗೆ ವಿಚಾರಣೆ ಎಂದು ಪ್ರಕಟಣೆ ನೀಡಿದ್ದರೂ ಮೊದಲ ಕೆಲಗಂಟೆ ಕಾಲ ಯಾರೂ ಆಗಮಿಸಲಿಲ್ಲ. ನಂತರ, ಗೋಲಿಬಾರ್‌ನಲ್ಲಿ ಮೃತಪಟ್ಟ ಜಲೀಲ್ ಮತ್ತು ನೌಶೀನ್ ಅವರ ಮನೆಯವರ ಸಹಿತ ಒಟ್ಟು 14 ಮಂದಿ ವಿಚಾರಣಾಧಿಕಾರಿ ಮುಂದೆ ಹಾಜರಾಗಿ ಲಿಖಿತ ರೂಪದಲ್ಲಿ ಸಾಕ್ಷಿ ನುಡಿದರು.
    ಜಲೀಲ್ ಸೋದರಿ ಆಯಿಶಾ ಬಾನು ಅವರು ಜಲೀಲ್ ಪತ್ನಿ ಸಯೀದಾ ಅವರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದಿರಿಸಿದರು. ನನ್ನ ಗಂಡ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಇರಲಿಲ್ಲ, ನಮಾಜ್‌ಗೆಂದು ಡಿ.19ರಂದು ಸಾಯಂಕಾಲ 4.30ಕ್ಕೆ ತೆರಳುವ ವೇಳೆ ಜಲೀಲ್‌ರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡುವುದನ್ನು ನೋಡಿದ್ದೇನೆ ಎಂದು ಸಯೀದಾ ಹೇಳಿಕೆಯಲ್ಲಿ ತಿಳಿಸಿದರು. ನೌಶೀನ್ ಅವರ ತಾಯಿ ಮುಮ್ತಾಜ್ ಇನ್ನೋರ್ವ ಮಗ ನೌಫಾಲ್ ಹಾಗೂ ಇತರ ಕುಟುಂಬಸ್ಥರೊಡನೆ ಆಗಮಿಸಿ ಪೊಲೀಸರ ವಿರುದ್ಧ ಹೇಳಿಕೆ ನೀಡಿದರು.

    ಮುಸ್ಲಿಂ ಸೆಂಟ್ರಲ್ ಕಮಿಟಿಯ ಯು.ಬಿ.ಸಲೀಂ, ಸ್ಟೇಟ್‌ಬ್ಯಾಂಕ್ ವೃತ್ತದಲ್ಲಿ ಅಮಾಯಕರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿರುವುದು, ಅಶ್ರುವಾಯು ಶೆಲ್ ಸಿಡಿಸಿರುವುದು ಪ್ರತಿಭಟನಾಕಾರರ ಸಿಟ್ಟಿಗೆ ಕಾರಣವಾಗಿತ್ತು. ಅದರಿಂದಾಗಿ ಅವರು ಕಲ್ಲೆಸೆದಿದ್ದರು, ಆದರೆ ಪೂರ್ವಸೂಚನೆಯಿಲ್ಲದೆ ಪೊಲೀಸರು ಗುಂಡು ಸಿಡಿಸಿ ಇಬ್ಬರ ಸಾವಿಗೆ ಹಾಗೂ ಅನೇಕರು ಗಂಭೀರವಾಗಿ ಗಾಯಗೊಳ್ಳುವಂತಾಗಿದೆ ಎಂದು ಹೇಳಿಕೆ ನೀಡಿದರು.

     ವಿಚಾರಣೆ, ಸಮಗ್ರ ಮಾಹಿತಿ ಬಳಿಕ ಸರ್ಕಾರಕ್ಕೆ ವರದಿ: ಯಾವುದೋ ಕಾರಣಕ್ಕೆ ವಿಚಾರಣೆಗೆ ಸ್ಪಂದನೆ ಕಡಿಮೆ ಸಿಕ್ಕಿರಬಹುದು. ಅಗತ್ಯವಿದ್ದಲ್ಲಿ ಮುಂದೆಯೂ ಸಾರ್ವಜನಿಕರಿಂದ ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ವಿಚಾರಣಾ ಮ್ಯಾಜಿಸ್ಟ್ರೇಟ್ ಜಗದೀಶ್ ತಿಳಿಸಿದರು.

    ಗೋಲಿಬಾರ್ ನಡೆಯಲು ಏನು ಕಾರಣ? ಪೊಲೀಸ್ ಶೂಟೌಟ್ ಅಗತ್ಯವಿತ್ತೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ಪೊಲೀಸರಿಂದಲೂ ಅಗತ್ಯವಿರುವ ಮಾಹಿತಿ, ಎಫ್‌ಐಆರ್ ದಾಖಲೆ, ಠಾಣೆ ದಿನಚರಿ ದಾಖಲೆ, ವಿಧಿವಿಜ್ಞಾನ ವರದಿ, ಅಗತ್ಯವಿದ್ದಲ್ಲಿ ಸಿಸಿಟಿವಿ ಫೂಟೇಜ್ ಪಡೆಯಲಾಗುವುದು, ಮಾರ್ಚ್ 23ರ ವರೆಗೂ ವಿಚಾರಣೆಗೆ ಸಮಯಾವಕಾಶವಿದ್ದು ಆ ಬಳಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಸಾರ್ವಜನಿಕರು ಘಟನೆ ಕುರಿತು ಮಾಹಿತಿಯನ್ನು ಮುಂದೆಯೂ ನೀಡಬಹುದು, ಆದರೆ ವಕೀಲರ ಮೂಲಕ ನೀಡುವಂತಿಲ್ಲ, ಬದಲು ಸ್ವತಃ ಆಗಮಿಸಿ ಮ್ಯಾಜಿಸ್ಟ್ರೇಟ್ ಮುಂದೆಯೇ ನಿಯಮಾನುಸಾರ ನೀಡಬೇಕಾಗುತ್ತದೆ, ಮುಂದಿನ ವಿಚಾರಣೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts