ಗಲ್ಫ್​ ರಾಷ್ಟ್ರಗಳಲ್ಲಿ ನಿತ್ಯ 15 ಭಾರತೀಯರ ಮರಣ: ಕಳೆದ ಐದು ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ ?

ನವದೆಹಲಿ: ಗಲ್ಫ್​​ ರಾಷ್ಟ್ರಗಳಾದ ಕುವೈತ್, ಸೌದಿ ಅರೇಬಿಯಾ, ಬಹ್ರೆನ್, ಕತಾರ್, ಒಮಾನ್ ಮತ್ತು ಯುಎಇಯಲ್ಲಿ ನಿತ್ಯ 15 ಭಾರತೀಯರು ಸಾವನ್ನಪ್ಪುತ್ತಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಇದು ಬಹಿರಂಗವಾಗಿದ್ದು, 2014 ರಿಂದೀಚೆಗೆ 33,988 ಭಾರತೀಯರು ಈ ಆರು ರಾಷ್ಟ್ರಗಳಲ್ಲಿ ಮರಣ ಹೊಂದಿದ್ದಾರೆ. 2019 ರಲ್ಲೇ 4823 ಮಂದಿ ಮೃತಪಟ್ಟಿದ್ದಾರೆ.

ಸಂಸತ್​ನಲ್ಲಿ ತೆಲಂಗಾಣ ಸಂಸದ ಎನ್. ಉತ್ತಮ್ ಕುಮಾರ್ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಗಲ್ಫ್​ ರಾಷ್ಟ್ರಗಳಲ್ಲಿ ಮೃತಪಟ್ಟ ಭಾರತೀಯರ ಅಂಕಿ ಅಂಶಗಳನ್ನು ನೀಡಿದರು. ಹೆಚ್ಚಿನ ಸಾವುಗಳು ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳಲ್ಲಿ ವರದಿಯಾಗಿವೆ ಎಂದು ಹೇಳಿದರು.

ಸೌದಿ ಅರೇಬಿಯಾದಲ್ಲಿ 1920 ಮಂದಿ ಮೃತಪಟ್ಟಿದ್ದರೆ, ಯುಎಇ ರಾಷ್ಟ್ರದಲ್ಲಿ 1451 ಭಾರತೀಯರು ಮೃತಪಟ್ಟಿದ್ದಾರೆ. ಸಾಲ ಮತ್ತು ಅತಿಯಾದ ಕೆಲಸದ ಒತ್ತಡ, ಏಜೆಂಟರ ಮೋಸದಿಂದ ಸಾವಿಗೆ ಶರಣಾಗುತ್ತಿದ್ದಾರೆ ಎನ್ನಲಾಗಿದೆ.

ತೆಲಂಗಾಣ ರಾಜ್ಯದ ಜನರು ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ಕಳದೆ 5 ವರ್ಷಗಳಲ್ಲಿ 1200 ಮಂದಿ ತೆಲಂಗಾಣ ವಾಸಿಗಳು ಮೃತಪಟ್ಟಿದ್ದಾರೆ ಎಂದು ತೆಲಂಗಾಣ ಎನ್​ಆರ್​ಐ ವಿಭಾಗದ ಅಧಿಕಾರಿ ಎನ್. ಚಿಟ್ಟಿಬಾಬು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಅಕ್ಟೋಬರ್ ವೇಳೆಗೆ ಗಲ್ಪ್​ ರಾಷ್ಟ್ರಗಳಲ್ಲಿರುವ ವಲಸಿಗ ಭಾರತೀಯರಿಂದ 15,051 ದೂರುಗಳನ್ನು ದಾಖಲಿಸಿಕೊಂಡಿದೆ. ಬಹುತೇಕ ದೂರುಗಳು ಉದ್ಯೋಗ ಕೊಡಿಸುವುದಾಗಿ ಏಜೆಂಟರಿಂದ ಮೋಸ, ಸಂಬಳ ಸರಿಯಾಗಿ ನೀಡದಿರುವುದು, ಕಾನೂನುಬದ್ಧ ಕಾರ್ಮಿಕ ಹಕ್ಕುಗಳ ನಿರಾಕರಣೆಗೆ ಸಂಬಂದಿಸಿವೆ ಎಂದು ವಿ.ಮುರಳೀಧರನ್ ಹೇಳಿದ್ದಾರೆ.