ರೋಷನ್​ಗೆ ಬಿಗಿಯಾಯ್ತು ಎಸ್​ಐಟಿ ಉರುಳು

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿ ಆಗಿರುವ ಆರೋಪ ಎದುರಿಸುತ್ತಿರುವ ಶಾಸಕ ರೋಷನ್ ಬೇಗ್​ಗೆ ಎಸ್​ಐಟಿ ಉರುಳು ಮತ್ತಷ್ಟು ಬಿಗಿಯಾಗತೊಡಗಿದೆ. ವಿಚಾರಣೆಗೆ ಬರಲು 15 ದಿನ ಕಾಲಾವಕಾಶ ಕೊಡಲು ನಿರಾಕರಿಸಿರುವ ಎಸ್​ಐಟಿ, ಜು.15ರಂದು ವಿಚಾರಣೆಗೆ ಬರಲು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ.

ಐಎಂಎ ಮಾಲೀಕ ಮನ್ಸೂರ್ ನಾಪತ್ತೆಯಾದ ನಂತರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ವಂಚನೆಗೆ ರೋಷನ್ ಬೇಗ್ ಕೂಡ ಕಾರಣ ಎಂದಿದ್ದ. ಹಾಗಾಗಿ ಜು.11ರಂದು ವಿಚಾರಣೆಗೆ ಹಾಜರಾಗುವಂತೆ ಬೇಗ್​ಗೆ ನೋಟಿಸ್ ಜಾರಿಯಾಗಿತ್ತು. ಗುರುವಾರ ಬೆಳಗ್ಗೆ ಎಸ್​ಐಟಿ ತನಿಖಾಧಿ ಕಾರಿ ಡಿಸಿಪಿ ಗಿರೀಶ್ ಅವರನ್ನು ಭೇಟಿ ಮಾಡಿದ್ದ ಬೇಗ್, ‘ಹಜ್ ಯಾತ್ರೆಗೆ ತೆರಳುತ್ತಿದ್ದೇನೆ. ಅನಾರೋಗ್ಯ ಮತ್ತು ವೈಯಕ್ತಿಕ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ. 15 ದಿನ ಕಾಲಾವಕಾಶ ನೀಡಿ’ ಎಂದು ಮನವಿ ಮಾಡಿದ್ದಾರೆ. ಮನವಿ ನಿರಾಕರಿಸಲಾಗಿದ್ದು, 15ರಂದು ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ. ಗೈರಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎಸ್​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೀಕರ್ ಭೇಟಿ: ಶಾಸಕ ಸ್ಥಾನಕ್ಕೆ ರೋಷನ್ ಬೇಗ್ ರಾಜೀನಾಮೆ ನೀಡಿರುವ ನಡುವೆಯೇ ಎಸ್​ಐಟಿ ತನಿಖಾಧಿಕಾರಿ ಡಿಸಿಪಿ ಗಿರೀಶ್ ವಿಧಾನಸೌಧಕ್ಕೆ ತೆರಳಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ರಾಜೀನಾಮೆ ಇನ್ನೂ ಅಂಗೀಕಾರವಾಗದ ಕಾರಣ, ಸ್ಪೀಕರ್ ಅನುಮತಿ ಇಲ್ಲದೆ ಶಾಸಕರನ್ನು ಆರೆಸ್ಟ್ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಂದಿದ್ದರು ಎನ್ನಲಾಗಿದೆ.

ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಪ್ರಕರಣದ ಆರೋಪಿಯೂ ಆಗಿರುವ ಬೆಂ.ನಗರ ಡಿಸಿ ಬಿ.ಎಂ.ವಿಜಯಶಂಕರ್ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್​ಕುಮಾರ್ ಅವರಿದ್ದ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ಸಿಬಿಐ ತನಿಖೆಗೆ ವಹಿಸುವಂತೆ ಸಲ್ಲಿಕೆಯಾಗಿರುವ ಮೂರು ಅರ್ಜಿಗಳು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದ್ದು, ಈ ಅರ್ಜಿಯನ್ನೂ ಅಲ್ಲಿಗೆ ವರ್ಗಾಯಿಸಬಹುದು ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಹೇಳಿದರು. ಪ್ರತಿಕ್ರಿಯಿಸಿದ ಪೀಠ, ಈ ಕುರಿತು ಸರ್ಕಾರ ಹಾಗೂ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಪ್ರಸ್ತಾಪಿಸಿ ಅರ್ಜಿ ವರ್ಗಾವಣೆಗೆ ಮನವಿ ಮಾಡಬಹುದು ಎಂದು ಸೂಚಿಸಿತು.

Leave a Reply

Your email address will not be published. Required fields are marked *