15 ದಿನದಲ್ಲಿ ಅಧಿಸೂಚನೆ ಹೊರಡಿಸಿ

ವಿಜಯವಾಣಿ ಸುದ್ದಿಜಾಲ ನರಗುಂದ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ರೈತರಿಗೆ ನೀಡಿದ್ದ ಸಂಪೂರ್ಣ ಸಾಲಮನ್ನಾದ ಶ್ವೇತಪತ್ರವನ್ನು ತಕ್ಷಣ ಹೊರಡಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ 39ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಮಹದಾಯಿ ಯೋಜನೆ ಬೇಡಿಕೆ ಈಡೇರಿಸದ ರಾಜ್ಯ, ಕೇಂದ್ರ ಸರ್ಕಾರಗಳು ರೈತರ ತೇಜೋವಧೆ ಮಾಡುತ್ತಿವೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಬದಲಿಗೆ ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ಎಲ್ಲ ರೈತರಿಗೆ ಮಾಸಿಕ 6 ಸಾವಿರ ರೂ. ಪಿಂಚಣಿ ನೀಡಬೇಕು. ರೈತರ ಎಲ್ಲ ಬೆಳೆಗಳನ್ನು ಸರ್ಕಾರ ನೇರವಾಗಿ ಖರೀದಿಸಬೇಕು. ಸಾವಯುವ ಕೃಷಿಗೆ ಆದ್ಯತೆ ನೀಡಬೇಕು. ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೇಂದ್ರ ಸರ್ಕಾರ 15 ದಿನಗಳಲ್ಲಿ ಮಹದಾಯಿ ನದಿ ನೀರು ಬಳಕೆ ಕಾಮಗಾರಿ ಕೈಗೊಳ್ಳಲು ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಮಧುಸೂದನ ತಿವಾರಿ, ಹುನಗುಂದ ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಬಸವರಾಜ ಸಾಬಳೆ, ವಿಠಲ ಜಾಧವ ಮಾತನಾಡಿದರು. ಶಶಿಕಾಂತ ಬಂಡರಗಲ್, ಶರಣಪ್ಪ ಮಿರ್ಜಿ, ಶಿವಪುತ್ರಗೌಡ, ಹುಲಿಗೈ, ಸಿಂಧನೂರ ತಾಲೂಕಿನ ರೈತರು ಇದ್ದರು.

ಹೋರಾಟದಲ್ಲಿ 139 ಮಂದಿ ಸಾವು: ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, 1980ರಿಂದ ಇಲ್ಲಿಯವರೆಗೆ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಇದರಲ್ಲಿ ರಾಜ್ಯದ 139 ರೈತರು ಮೃತಪಟ್ಟಿದ್ದಾರೆ. ಆದರೆ, ದೇಶದಲ್ಲಿ ಅವರಿಗೆ ಯಾವುದೇ ಸರ್ಕಾರದಿಂದ ಅನುಕೂಲಕರ ವಾತಾವರಣ ಇಲ್ಲ. ನಾನು ಶಾಸಕನಾಗಿದ್ದಾಗ ನರಗುಂದ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನೀರಾವರಿ ಕಾಲುವೆ ನವೀಕರಣಗೊಳಿಸಲು ಸರ್ಕಾರದಿಂದ 1200 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಪಡಿಸಿದ್ದೇನೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ರೈತರ ಕೆಲಸ ಮಾಡುವವರಿಗೆ ಮತ ಹಾಕಲಿಲ್ಲ. ಬದಲಿಗೆ ರೈತ ವಿರೋಧಿ ಬಿಜೆಪಿಗೆ ಮತ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *