149.60 ಕೋ.ರೂ. ಬೆಳೆ ವಿಮೆ ಬಿಡುಗಡೆ

ಹುಬ್ಬಳ್ಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2018ರ ಹಿಂಗಾರು ವಿಮಾ ಯೋಜನೆ ಮಾಡಿಸಿದ ಧಾರವಾಡ ಜಿಲ್ಲೆಯ 75,638 ರೈತರಿಗೆ ಒಟ್ಟು 149.60 ಕೋಟಿ ರೂ. ವಿಮೆ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪ್ರಮುಖ ಬೆಳೆಗಳಾದ ಗೋದಿ, ಜೋಳ, ಕಡಲೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ವಿಮೆ ಮಂಜೂರಿಯಾಗಿದ್ದು, ಕಳೆದ 2 ದಿನಗಳಿಂದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದೆ.

ಹಿಂಗಾರು ಹಂಗಾಮಿನ ಬೆಳೆ ನಷ್ಟವಾದ ಕಾರಣ ಸಂಕಷ್ಟದಲ್ಲಿದ್ದ ರೈತರಿಗೆ ಬೆಳೆವಿಮೆ ಹಣ ದೊರೆಯುತ್ತಿರುವುದು ಆರ್ಥಿಕವಾಗಿ ಸಾಕಷ್ಟು ಸಹಕಾರಿಯಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಬೆಳೆ ವಿಮೆ ಹಣ ಲಭಿಸಿರುವುದು ಇದೇ ಮೊದಲು.

ಧಾರವಾಡ ತಾಲೂಕಿನ 11,136 ರೈತರಿಗೆ 19.67 ಕೋಟಿ ರೂ, ಹುಬ್ಬಳ್ಳಿ ತಾಲೂಕಿನ 13,939 ರೈತರಿಗೆ 35.75 ಕೋಟಿ ರೂ., ಕಲಘಟಗಿ ತಾಲೂಕಿನ 3,951 ರೈತರಿಗೆ 2.89 ಕೋಟಿ ರೂ., ಕುಂದಗೋಳ ತಾಲೂಕಿನ 10,993 ರೈತರಿಗೆ 23.16 ಕೋಟಿ ರೂ. ಹಾಗೂ ನವಲಗುಂದ ತಾಲೂಕಿನ 35,619 ರೈತರಿಗೆ 68.12 ಕೋಟಿ ರೂ. ಮಂಜೂರಾಗಿದೆ.

ಕಳೆದ 3 ತಿಂಗಳ ಹಿಂದೆಯಷ್ಟೇ ಜಿಲ್ಲೆಯ 2018ನೇ ಸಾಲಿನ ಮುಂಗಾರು ಬೆಳೆ ವಿಮಾ ಮೊತ್ತ 114 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿತ್ತು. ಈ ವಿಮಾ ಮೊತ್ತ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ. ಒಂದೇ ವರ್ಷದಲ್ಲಿ ಜಿಲ್ಲೆಗೆ 264 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ವಿಮೆಗೊಳಪಡಿಸಿದ ಬೆಳೆಗಳ ಪರಿಶೀಲನೆ ಕಾರ್ಯದ ನಿಯಮಗಳಲ್ಲಿ ಸಮರ್ಪಕ ಬದಲಾವಣೆ ಮಾಡಿದ್ದೇ ಧಾರವಾಡ ಜಿಲ್ಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ವಿಮಾ ಮೊತ್ತ ಬಿಡುಗಡೆಗೊಳ್ಳಲು ಪ್ರಮುಖ ಕಾರಣ. ಜಿಲ್ಲೆಯ 144 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಗಳ ವಿಮೆ ಪರಿಶೀಲನೆಗಾಗಿ 272 ಘಟಕಗಳನ್ನು ಈ ಬಾರಿ ರಚಿಸಲಾಗಿತ್ತು. ಹೀಗಾಗಿ ಪ್ರತಿ ಹೋಬಳಿ ಮಟ್ಟದ ಕೃಷಿ ಜಮೀನಿನಲ್ಲಿರುವ ಬೆಳೆಗಳನ್ನು ಪರಿಶೀಲಿಸಲು ಸಹಕಾರಿಯಾಯಿತು. ಈ ಹಿಂದೆ ಹೋಬಳಿಯ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಬೆಳೆಗಳನ್ನು ಪರಿಶೀಲಿಸಿ, ಆ ಬೆಳೆಯ ಗುಣಮಟ್ಟದ ಆಧಾರದ ಮೇಲೆ ಇಡಿ ಹೋಬಳಿಯ ಬೆಳೆಗಳನ್ನು ಅಂದಾಜು ಮಾಡಲಾಗುತ್ತಿತ್ತು. ಇದರಿಂದಾಗಿ ರೈತರಿಗೆ ಅತಿ ಕಡಿಮೆ ಮೊತ್ತದ ವಿಮಾ ಪರಿಹಾರ ಹಣ ಅವರ ಖಾತೆಗೆ ಜಮಾ ಆಗುತ್ತಿತ್ತು. ಅಳ್ನಾವರ ಹಾಗೂ ಧಾರವಾಡ ಭಾಗದ 2015-16ನೇ ಸಾಲಿನ 364 ರೈತರಿಗೆ 3.92 ಕೋಟಿ ರೂ. ಭತ್ತದ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಬೇಕಿದ್ದು, ಕೇಂದ್ರ ಸರ್ಕಾರ ಈ ಮೊತ್ತವನ್ನೂ ಶೀಘ್ರ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳೆವಿಮೆ ಪರಿಶೀಲನೆಯಲ್ಲಿ ಈ ಮೊದಲು ಇದ್ದ ನಿಯಮಗಳಿಂದಾಗಿ ರೈತರಿಗೆ ಹೆಚ್ಚಿನ ಪರಿಹಾರ ದೊರೆಯುತ್ತಿರಲಿಲ್ಲ. ಆದರೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ಬೆಳೆ ವಿಮಾ ಮೊತ್ತ ಪರಿಶೀಲನೆಯಲ್ಲಿ ಮಾಡಬೇಕಿರುವ ನಿಯಮಗಳ ಬದಲಾವಣೆಯನ್ನು ಮನದಟ್ಟು ಮಾಡಿದ ನಂತರ ರೈತರಿಗೆ ಹೆಚ್ಚಿನ ಪರಿಹಾರ ಮೊತ್ತ ದೊರೆಯುವಂತಾಯಿತು.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ

Leave a Reply

Your email address will not be published. Required fields are marked *