ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ ವಾಹನಗಳಲ್ಲಿ ಎಲ್‌ಇಡಿ ಹೈಬೀಮ್ ಲೈಟ್ ಬಳಸಿದ ಚಾಲಕ, ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಸೋಮವಾರ ಬೆಂಗಳೂರು ನಗರದಲ್ಲಿ 445 ಸೇರಿ ರಾಜ್ಯವ್ಯಾಪಿ 1,441 ವಾಹನಗಳಿಗೆ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.
ವಾಹನಗಳಿಗೆ ಎಲ್‌ಇಡಿ ಹೈಬೀಮ್ ಲೈಟ್ ಬಳಕೆಯಿಂದ ಎದುರು ಮುಖದಲ್ಲಿ ಸಂಚರಿಸುವ ಇತರ ವಾಹನ ಸವಾರ, ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಪರಿಣಾಮ ರಸ್ತೆ ಅಪಘಾತ ಸಂಭವಿಸುತ್ತಿದ್ದವು. ಪ್ರಮುಖವಾಗಿ ಭಾರಿ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳಿಂದ ಚಾಲಕರಿಗೆ ವಾಹನ ಚಲಾಯಿಸಲು ತೊಂದರೆ ಉಂಟಾಗುತ್ತಿತ್ತು.
ಇದಕ್ಕೆ ಕಡಿವಾಣ ಹಾಕುವ ಉದ್ದೇಶಕ್ಕೆ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲನೆ ಮಾಡಲು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಆದೇಶ ಹೊರಡಿಸಿದ್ದರು. ಜುಲೈ 1ರಿಂದ ರಾಜ್ಯದ ಎಲ್ಲೆಡೆ ದಂಡ ವಿಧಿಸುವುದಾಗಿ ಎಚ್ಚರಿಕೆ ಕೊಟ್ಟು ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.
ಅದರಂತೆ ಬೆಂಗಳೂರು ನಗರ ಸೇರಿ ಎಲ್ಲೆಡೆ ಪೊಲೀಸರು ಸೋಮವಾರ ರಾತ್ರಿ ಎಲ್‌ಇಟಿ ಹೈಬೀಮ್ ಲೈಟ್ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177ರಡಿ ಬೆಂಗಳೂರು ನಗರ ಸಂಚಾರ ಪೊಲೀಸರು 445 ಕೇಸ್ ಮತ್ತು ರಾಜ್ಯದ ಇತರಡಿ 996 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ. ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.