ಚಿಕಿತ್ಸೆ ಫಲಿಸದೆ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಬಾಲಕ ಸಾವು

ಬೆಂಗಳೂರು: ಮತ್ತಿಕೆರೆಯ ನೇತಾಜಿನಗರದಲ್ಲಿ ಮನೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಾವಿನ ಹಿನ್ನೆಲೆಯಲ್ಲಿ ಬೆಸ್ಕಾಂ, ಕೆಪಿಟಿಸಿಎಲ್ ಹಾಗೂ ಮನೆ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಿಕೆರೆ ನೇತಾಜಿನಗರದ ನಿವಾಸಿ ನಿಖಿಲ್ (14) ಮೃತ ಬಾಲಕ. ಬಾಲಕನ ಸಾವಿಗೆ ಬೆಸ್ಕಾಂ, ಕೆಪಿಟಿಸಿಎಲ್ ಹಾಗೂ ಮನೆ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಯಶವಂತಪುರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಮನೆ ಮಹಡಿಯ ಮೇಲೆ ಹೈಟೆನ್ಷನ್ ತಂತಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕಟ್ಟಡದ ಎತ್ತರಿಸದಂತೆ ಮನೆ ಮಾಲೀಕ ಜಗನ್ನಾಥ್​ಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೋಟಿಸ್

ನಿರ್ಲಕ್ಷಿಸಿದ್ದಾರೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್ ತಂತಿ ಅಧಿಕೃತವಲ್ಲ. ಮನೆ ಮಹಡಿ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಲು ಅವಕಾಶಗಳನ್ನು ಕಲ್ಪಿಸಿರಲಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ: ನಗರದಲ್ಲಿ ಎಲ್ಲೆಲ್ಲಿ ಮನೆ ಮೇಲೆ ಹೈಟೆನ್ಷನ್ ತಂತಿ ಹಾದು ಹೋಗಿದೆ ಎಂಬುದನ್ನು ಗಮನಿಸಿ, ಅಂತಹ ಮನೆ ಮಾಲೀಕರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದೇವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ

ತನಿಖೆ ನಡೆಸಿ, ಯಾವುದಾದರೂ ಇಲಾಖೆಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದು ಆಕಸ್ಮಿಕವಾಗಿ ಸಂಭವಿಸಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಓರ್ವ ಎಲೆಕ್ಟ್ರಿಕಲ್ ಇಂಜಿನಿಯರ್​ನನ್ನು ದುರ್ಘಟನೆ ನಡೆದ ಸ್ಥಳಕ್ಕೆ ಕರೆಸಿ ಈ ಬಗ್ಗೆ ಅವರ ಅಭಿಪ್ರಾಯ ಕೇಳಿದ್ದೇವೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಚೆಂಡು ತರಲು ಮಹಡಿಗೆ ಹೋಗಿದ್ದಾಗ ದುರಂತ

ಗುರುವಾರ (ಮೇ 16) ಬೆಳಗ್ಗೆ 11 ಗಂಟೆಗೆ ಸ್ನೇಹಿತರ ಜತೆ ಕ್ರಿಕೆಟ್ ಆಟವಾಡುತ್ತಿದ್ದಾಗ ಚೆಂಡು, ನಿಖಿಲ್​ನ ಮನೆ ಪಕ್ಕದಲ್ಲಿರುವ ಜಗನ್ನಾಥ್ ಎಂಬುವರ ಮನೆಯ ಮಹಡಿ ಮೇಲೆ ಬಿದ್ದಿತ್ತು. ಚೆಂಡನ್ನು ತರಲು ನಿಖಿಲ್ ಮಹಡಿಗೆ ಹೋದಾಗ ಮಹಡಿ ಮೇಲ್ಬಾಗದಲ್ಲಿ ಹಾದು ಹೋಗಿರುವ 66 ಸಾವಿರ ಕಿಲೋ ವಾಟ್ ಹೈಟೆನ್ಷನ್ ವೈಯರ್​ನಿಂದ ನಿಖಿಲ್ ದೇಹಕ್ಕೆ ವಿದ್ಯುತ್ ಪ್ರವಹಿಸಿತ್ತು. ಬಾಲಕನ ದೇಹ ಶೇ.47 ಸುಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 66 ಸಾವಿರ ಕಿಲೋ ವಾಟ್ ಸಾಮರ್ಥ್ಯದ ವಿದ್ಯುತ್ ತಂತಿಯಿಂದ ಎರಡೂವರೆ ಮೀಟರ್ ದೂರವಿದ್ದರೂ ವಿದ್ಯುತ್ ಪ್ರವಹಿಸುತ್ತದೆ. ಆದ್ದರಿಂದ ಆತನಿಗೆ ವಿದ್ಯುತ್ ಪ್ರವಹಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.