ಹುಬ್ಬಳ್ಳಿ : ಲೋಂಡಾ – ವಾಸ್ಕೊ ಮಾರ್ಗದ ಸೊನಾಲಿಮ್ ಮತ್ತು ದೂಧಸಾಗರ ನಿಲ್ದಾಣ ಮಧ್ಯದ ಬ್ರಗಾಂಜಾ ಘಾಟ್ನಲ್ಲಿ ಶುಕ್ರವಾರ ಬೆಳಗ್ಗೆ ಹಳಿ ತಪ್ಪಿದ ಕಲ್ಲಿದ್ದಿಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 17 ಬೋಗಿಗಳ ಪೈಕಿ 14 ಬೋಗಿಗಳನ್ನು ಶನಿವಾರ ಮಧ್ಯಾಹ್ನದವರೆಗೆ ಮರಳಿ ಹಳಿಗೆ ಸೇರಿಸಲಾಗಿದ್ದು, ಇನ್ನುಳಿದ ಮೂರು ಬೋಗಿಗಳನ್ನು ಹಳಿಗೆ ಸೇರಿಸುವ ಕಾರ್ಯಾಚರಣೆ ಮುಂದುವರೆದಿದೆ.
ಒಟ್ಟು 58 ಬೋಗಿಗಳ ಪೈಕಿ 17 ಬೋಗಿಗಳು ಹಳಿ ತಪ್ಪಿದ್ದವು. ಬೋಗಿಗಳನ್ನು ಮರಳಿ ಹಳಿಗೆ ಸೇರಿಸುವ ಕಾರ್ಯಾಚರಣೆಯನ್ನು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತಗತಿಯಿಂದ ಪ್ರಾರಂಭಿಸಿದರು.
ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದರೆ, ಇನ್ನೂ ಕೆಲವು ರೈಲುಗಳ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿತ್ತು.
ಶನಿವಾರವೂ ಸಹ ಶಾಲಿಮಾರ- ವಾಸ್ಕೊ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಿತು. ಈ ರೈಲಿನ ಅಂದಾಜು 800 ಪ್ರಯಾಣಿಕರಿಗೆ ಹುಬ್ಬಳ್ಳಿಯಿಂದ ವಾಸ್ಕೊಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಗೂಡ್ಸ್ ರೈಲಿನ ಬೋಗಿಗಳನ್ನು ಮರಳಿ ಹಳಿಗೆ ಸೇರಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆದಿದ್ದು, ಭಾನುವಾರದವರೆಗೆ ರೈಲುಗಳ ಸಂಚಾರ ಎಂದಿನಂತೆ ಪ್ರಾರಂಭಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಹಾಗೂ ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.