ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ
ಊರಿನಲ್ಲಿ ಯಾರನ್ನು ಕೇಳಿದರೂ ಆ ಜಮೀನು ಇಂಥವರ ಪಿತ್ರಾರ್ಜಿತ ಆಸ್ತಿ ಎಂದು ಹೇಳುತ್ತಾರೆ. ಐದಾರು ವರ್ಷ ಹಿಂದಿನ ಪಹಣಿ ಪತ್ರದಲ್ಲೂ ಹಾಗೇ ಇದೆ. ಆದರೆ, ನಂತರದಲ್ಲಿ ಯಾರಿಗೂ ಗೊತ್ತಿಲ್ಲದೇ ಪಹಣಿ ಪತ್ರದಲ್ಲಿ ವಕ್ಪ್ ಹೆಸರು ಬಂದು ಕುಳಿತು ಬಡಪಾಯಿ ರೈತರನ್ನು ಅಣಕಿಸುತ್ತಿದೆ…!
ಇದು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ 14 ಎಕರೆ ಜಮೀನಿನ ಕತೆ. ಸುಮ್ಮನೆ ತಮ್ಮ ಪಾಡಿಗೆ ತಾವು ಬೆಳೆದು ಇತರರಿಗೆ ಅನ್ನ ಹಾಕುವ ರೈತರಿಗೆ, ಅನ್ಯ ಧರ್ಮದ ಮಂಡಳಿ ಹೆಸರು ಬಂದು ತಮ್ಮ ಭೂಮಿಯ ಪಹಣಿಯಲ್ಲಿ ನಮೂದಾಗಿರುವುದನ್ನು ಕಂಡು ದಂಗು ಬಡಿದಂತಾಗಿದೆ.
ಉಪ್ಪಿನಬೆಟಗೇರಿಯ ಮರಬಸಪ್ಪ ಮಸೂತಿ ಹಾಗೂ ಶ್ರೀಶೈಲ ಮಸೂತಿ ಜಂಟಿ ಖಾತೆಯ ಬ್ಲಾಕ್ ನಂ.29ರಲ್ಲಿ 3 ಎಕರೆ 13 ಗುಂಟೆ, ಮಲ್ಲಿಕಾರ್ಜುನ ಹುಟಗಿ ಅವರ ಬ್ಲಾಕ್ ನಂ. 142ರಲ್ಲಿಯ 5 ಎಕರೆ 37 ಗುಂಟೆ, ಬ್ಲಾಕ್ ನಂ. 141ರ ಹಿಸ್ಸಾ ನಂ. 2, 3, 4ರಲ್ಲಿ ಗಂಗಪ್ಪ ರುದ್ರಪ್ಪ ಜವಳಗಿ ಅವರ 3 ಎಕರೆ 21 ಗುಂಟೆ, ಬಾಳಪ್ಪ ರುದ್ರಪ್ಪ ಜವಳಗಿ ಅವರ 0.26 ಹಾಗೂ ಸರೋಜಾ ಜವಳಗಿ ಅವರ 2 ಎಕರೆ 12 ಗುಂಟೆ ಜಮೀನುಗಳ ಪಹಣಿ ತೆಗೆಸಿದರೆ, ಋಣಮುಕ್ತ ಕಾಲಂನಲ್ಲಿ ವಕ್ಪ್ ಹೆಸರು ದಾಖಲಾಗಿರುವುದು ರೈತರು ಕಂಗೆಡುವಂತೆ ಮಾಡಿದೆ.
2018, 2019ರ ಜಮೀನುಗಳ ಪಹಣಿ ಪತ್ರಿಕೆಯಲ್ಲಿ ವಕ್ಪ್ ಪ್ರಸ್ತಾಪವೇ ಇಲ್ಲ. 2021ರಿಂದ 2024ರ ಪಹಣಿ ತೆಗೆಸಿದರೆ ಅದರಲ್ಲಿ ವಕ್ಪ್ ಆಸ್ತಿಗೆ ಒಳಪಟ್ಟಿವೆ ಎಂಬುದು ನಮೂದಾಗಿದೆ.
ಸಾಲಕ್ಕೂ ಕುತ್ತು: ವಕ್ಪ್ ಆಸ್ತಿ ಎಂದು ದಾಖಲಾಗಿರುವುದರಿಂದ ಬ್ಯಾಂಕ್ನಲ್ಲಿ ಬೆಳೆ ಸಾಲ ಸಿಗುತ್ತಿಲ್ಲ. ಜಮೀನು ಮಾರಾಟ ಮಾಡೋಣ ಅಂದರೆ ಅದಕ್ಕೂ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ರೈತರು.
ಉಪ್ಪಿನಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಕುಟುಂಬಕ್ಕೆ ಸೇರಿದ ಜಮೀನುಗಳು ಪಿತ್ರಾರ್ಜಿತ ಆಸ್ತಿಯಾಗಿವೆ. ಅವುಗಳನ್ನು ಯಾರಿಂದಲೂ ದಾನವಾಗಿ ಪಡೆದಿಲ್ಲ. ಆದರೂ ಪಹಣಿಯಲ್ಲಿ ವಕ್ಪ್ ಆಸ್ತಿಗೆ ಈ ಜಮೀನು ಒಳಪಟ್ಟಿದೆ ಎಂದು ದಾಖಲೆಯಲ್ಲಿ ತೋರಿಸುತ್ತಿದೆ. ಅದನ್ನು ತೆಗೆದು ಹಾಕಲೆಂದು ಮೂರ್ನಾಲ್ಕು ವರ್ಷಗಳಿಂದ ರೈತರು ವಕ್ಪ್ ಕಚೇರಿ, ತಹಸೀಲ್ದಾರ್ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕುತ್ತ ಕಾಲಹರಣ ಮಾಡಿದ್ದಾರೆ ಹೊರತು ಸಮಸ್ಯೆ ಬಗೆಹರಿಸುವ ಗೋಜಿಗೆ ಮುಂದಾಗಿಲ್ಲ.
ಗ್ರಾಮದಲ್ಲೇ ಮೂರ್ನಾಲ್ಕು ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ಈ ರೀತಿ ನಮೂದಾಗಿದ್ದು, ರೈತರು ವಕ್ಪ್ ಕಚೇರಿ ಎದುರೇ ಧರಣಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ
ಕೈವಾಡ ಯಾರದ್ದು?: ತಲತಲಾಂತರದಿಂದ ರೈತರ ಕಬ್ಜಾದಲ್ಲಿರುವ ಆಸ್ತಿ ದಾಖಲೆಯಲ್ಲಿ ವಕ್ಪ್ ಹೆಸರು ಸೇರ್ಪಡೆ ಹಿಂದೆ ಕುತಂತ್ರಿಗಳ ಕೈವಾಡ ಇದೆ. ವಕ್ಪ್ ಹೆಸರು ಸೇರಿಸುವುದು, ತಕರಾರು/ಪ್ರತಿರೋಧ ಬಂದರೆ ಕಣ್ತಪ್ಪಿನಿಂದ ಆಗಿದೆ ಎಂದು ಸಬೂಬು ಹೇಳಿದರಾಯಿತು. ಅದಲ್ಲದಿದ್ದರೆ ರೈತರು ವಕ್ಪ್ ಮಂಡಳಿ ಜತೆ ಬಡಿದಾಡಿಕೊಂಡು ಸಾಯಲಿ ಎಂಬ ದುರುದ್ದೇಶದಿಂದ ಕೆಲ ಅಧಿಕಾರಿ-ಸಿಬ್ಬಂದಿ ಸೇರಿಕೊಂಡು (ಯಾರಿಂದಲೋ) ಲಂಚ ತಿಂದು ಇಂಥ ‘ಅಪರಾಧಿಕ’ ಕೃತ್ಯ ಮಾಡಿದ್ದಾರೆ. ತಪ್ಪಾಗಿರುವುದನ್ನು ತಿದ್ದುಪಡಿ ಮಾಡುವುದರೊಟ್ಟಿಗೆ, ತಪ್ಪು ಮಾಡಿದವರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಗ್ರಾಮದ ರೈತರು ಆಗ್ರಹಿಸಿದ್ದಾರೆ.
2017ರಲ್ಲಿ ನಮ್ಮ ಹೊಲದ ಪಹಣಿ ಪತ್ರಿಕೆಗಳಲ್ಲಿ ವಕ್ಪ್ ಎಂಬ ಶಬ್ದವೇ ಇಲ್ಲ. 2021ರ ನಂತರದ ಎಲ್ಲ ಪಹಣಿ ಪತ್ರಿಕೆಗಳ ಋಣಮುಕ್ತ ಕಾಲಂನಲ್ಲಿ ವಕ್ಪ್ ಆಸ್ತಿ ಎಂದು ದಾಖಲೆ ತೋರಿಸುತ್ತಿದೆ. ಇದನ್ನು ತೆಗೆದುಹಾಕಲು ತಹಸೀಲ್ದಾರ್ ಹಾಗೂ ವಕ್ಪ್ ಕಚೇರಿಗೆ ಸಾಕಷ್ಟು ಅಲೆದಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ
| ಮರಬಸಪ್ಪ ಮಸೂತಿ ಉಪ್ಪಿನಬೆಟಗೇರಿ ರೈತ
ಉಪ್ಪಿನಬೆಟಗೇರಿ ರೈತರ ಆಸ್ತಿಗಳಲ್ಲಿ ವಕ್ಪ್ ಹೆಸರು ಸೇರ್ಪಡೆಯಾದ ಬಗ್ಗೆ ಮಾಹಿತಿ ಇದೆ. ಈ ಕುರಿತು ವಕ್ಪ್ ಅಧಿಕಾರಿಗಳನ್ನು ಕೇಳಿದರೆ, ನೀವೇ ಅದನ್ನು ತೆಗೆದು ಹಾಕಿ ಎನ್ನುತ್ತಾರೆ. ಆದರೆ, ಒಬ್ಬರ ಆಸ್ತಿಯನ್ನು ಬೇರೋಬ್ಬರ ಹೆಸರಿನಲ್ಲಿ ನಮೂದಿಸಲು ಅಥವಾ ಬದಲಾವಣೆ ಮಾಡಲು ಸೂಕ್ತ ದಾಖಲೆಗಳು ಬೇಕಾಗುತ್ತವೆ. ಹೀಗಾಗಿ ವಕ್ಪ್ ಮಂಡಳಿ ಈ ಆಸ್ತಿ ನಮ್ಮದಲ್ಲ ಎಂದು ಲಿಖಿತ ರೂಪದಲ್ಲಿ ನೀಡಿದರೆ, ಪಹಣಿ ಪತ್ರಿಕೆಯಿಂದ ವಕ್ಪ್ ಹೆಸರು ತೆಗೆದು ಹಾಕಲಾಗುವುದು. | ಡಿ.ಎಚ್. ಹೂಗಾರ, ತಹಸೀಲ್ದಾರ್ ಧಾರವಾಡ