14 ಲಕ್ಷ ಫಲಾನುಭವಿಗಳಿಗೆ ಲಾಭ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಡ ಮತ್ತು ಶ್ರಮಿಕ ವರ್ಗದವರು ಗಂಭೀರ ಕಾಯಿಲೆಗೆ ತುತ್ತಾದಾಗ ಹಣವಿಲ್ಲದೆ ಸೂಕ್ತ ಚಿಕಿತ್ಸೆ ಪಡೆಯಲು ಪರದಾಡುವುದನ್ನು ತಪ್ಪಿಸಲು ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಹಾಗೂ ಸ್ವಾಭಿಮಾನದ ಬದುಕು ಸಾಗಿಸಲು ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಲಾಗಿದ್ದು, ಜಾರಿಯಾದ 150 ದಿನದಲ್ಲೇ ಸುಮಾರು 14 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುಧವಾರ ಎನ್.ವಿ. ಮೈದಾನದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದ ಆರೋಗ್ಯ ಕ್ಷೇತ್ರದಲ್ಲೇ ಆಯುಷ್ಮಾನ್ ಭಾರತ ಮಹತ್ವಪೂರ್ಣ ಯೋಜನೆ. ಇದರಡಿ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಬಡಜನರು ಹಣವಿಲ್ಲದೆ ಮೃತ್ಯುವಿಗೆ ಆಹ್ವಾನ ನೀಡುವ ಕಾಲ ಇದೀಗ ಬದಲಾಗಿದೆ. ಪ್ರತಿಯೊಬ್ಬರೂ ಗೌರವದ ಬದುಕು ಸಾಗಿಸಬೇಕೆಂಬುದು ಸರ್ಕಾರದ ಆಶಯ. ಪ್ರತಿದಿನ ಕನಿಷ್ಠ 10 ಸಾವಿರ ಜನರು ಈ ಯೋಜನೆಯಡಿ ಉಚಿತ ಲಾಭ ಪಡೆಯುತ್ತಿದ್ದು, ಬಡವರಿಗೆ ವರದಾನವಾಗಿದೆ ಎಂದರು.

ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸ್ಟೋನ್ ಇತರ ಗಂಭೀರ ಕಾಯಿಲೆಗೆ ತುತ್ತಾಗಿ ಆಯುಷ್ಮಾನ್ ಭಾರತದಡಿ ಶಸ್ತ್ರಚಿಕಿತ್ಸೆ ಅಲ್ಲದೆ ಇತರ ರೀತಿಯಲ್ಲಿ ಉಚಿತ ಚಿಕಿತ್ಸೆ ಪಡೆದ ಕಲಬುರಗಿ ಮತ್ತು ಬೀದರ್ ಜಿಲ್ಲೆಯ 20 ಫಲಾನುಭವಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ಕೇಂದ್ರ ಸರ್ಕಾರದ ಅಂಕಿ-ಸಂಖ್ಯೆ ಹಾಗೂ ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಡಿಎಚ್ಒ ಡಾ.ಮಾಧವರಾವ ಕೆ. ಪಾಟೀಲ್ ಇದ್ದರು.

ರಾಜ್ಯ ಸರ್ಕಾರದಿಂದ 250 ಕೋಟಿ ಖರ್ಚು

ಆಯುಷ್ಮಾನ್ ಭಾರತ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ 1 ಲಕ್ಷ ಫಲಾನುಭವಿಗಳು ಲಾಭ ಪಡೆದಿದ್ದು, ಇದಕ್ಕಾಗಿ 250 ಕೋಟಿ ರೂ. ರಾಜ್ಯ ಸರ್ಕಾರ ಖರ್ಚು ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 80 ಕೋಟಿ ರೂ. ಇದೆ. ಕಲಬುರಗಿ ಜಿಲ್ಲೆಯ ಸುಮಾರು 5000 ಜನ ಆಯುಷ್ಮಾನ್ ಭಾರತದಲ್ಲಿ ಉಚಿತ ಚಿಕಿತ್ಸೆ ಪಡೆಯಲು 20 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಮಾಹಿತಿ ನೀಡಿದರು.