ಚಿಕ್ಕೋಡಿ: ಸಚಿವ ಸತೀಶ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ಸತೀಶ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಚಿಕ್ಕೋಡಿಯ ಆರ್.ಡಿ.ಹೈಸೂಲ್ ಮೈದಾನದಲ್ಲಿ ಡಿ.14, 15 ರಂದು ಅಂತಿಮ ಹಂತದ ಸತೀಶ ಶುಗರ್ಸ್ ಅವಾರ್ಡ್ಸ್ ಮತ್ತು ಡಿ.16 ರಂದು ರಾಜ್ಯ ಮತ್ತು ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ತಿಳಿಸಿದರು.
ಪಟ್ಟಣದ ಸಂಸದರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಟ್ಟಮೊದಲ ಬಾರಿಗೆ ಚಿಕ್ಕೋಡಿಯಲ್ಲಿ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಿಸ್ಟರ್ ಸತೀಶ ಶುಗರ್ಸ್ ಕ್ಲಾಸಿಕ್ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಪ್ರಯತ್ನ ನಿಮ್ಮದು ಪ್ರೋತ್ಸಾಹ ನಮ್ಮದು ಎಂಬ ಘೋಷಣೆಯೊಂದಿಗೆ ಪ್ರತಿಭಾವಂತರನ್ನು ಗೌರವಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಫೌಂಡೇಷನ್ ನಿರಂತರವಾಗಿ ಮಾಡುತ್ತಿದೆ.
ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾವಹಿಸಲಿದ್ದಾರೆ. ಸುಮಾರು 15 ಲಕ್ಷಕ್ಕೂ ಹೆಚ್ಚು ಬಹುಮಾನ ವಿತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.
ವಿವಿಧ ಕೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾವುದು. ಪ್ರೇಕ್ಷಕರಿಗಾಗಿ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೃಹತ್ 3 ಎಲ್‌ಇಡಿ ಸ್ಕ್ರೀನ್, ಸ್ಪರ್ಧಾಳುಗಳಿಗೆ ಊಟೋಪಹಾರ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಚಿಕ್ಕೋಡಿ ಭಾಗದ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮುಖಂಡರಾದ ಮಹಾವೀರ ಮೋಹಿತೆ, ಪುರಸಭೆ ಮಾಜಿ ಅಧ್ಯಕ್ಷ ಪಿ.ಐ.ಕೋರೆ, ಶಿವು ಪಾಟೀಲ, ಎಚ್.ಎಸ್.ನಸಲಾಪೂರೆ, ಕಿರಣ ರಜಪೂತ, ರಾಜು ಕೊಟಗಿ, ಪಿರೋಜ್ ಕಲಾವಂತ, ರಿಯಾಜ್ ಚೌಗಲಾ, ರುದ್ರಪ್ಪ ಸಂಗಪ್ಪಗೋಳ, ಸುರೇಶ ಘರಬುಡೆ, ರಾಜ್ ಜಾಧವ ಇತರರಿದ್ದರು.