ಉಡುಪಿ ಜಿಲ್ಲೆಯಲ್ಲಿ ಮಳೆಗೆ 130 ಎಕ್ರೆ ಭತ್ತ ಕೃಷಿ ಹಾನಿ

ಉಡುಪಿ: ಜೂನ್ ತಿಂಗಳ ಆರಂಭದ ಮಳೆಗೆ ಜಿಲ್ಲೆಯಲ್ಲಿ 130 ಎಕರೆ ಭತ್ತ ಕೃಷಿಗೆ ಹಾನಿಯಾಗಿದೆ. 7.66 ಲಕ್ಷ ರೂ, ರೈತರಿಗೆ ತುರ್ತು ಪರಿಹಾರವನ್ನು ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ತಿಳಿಸಿದರು.
ಸೋಮವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಗೆ ಹಾನಿಯಾದ ಭತ್ತ ಕೃಷಿಯ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಈ ಬಗ್ಗೆ ನಾನು ಪ್ರತಿದಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತಿದ್ದೇನೆ. ಇದನ್ನು ಪರಿಶೀಲಿಸಿ ಶೀಘ್ರವೇ ರೈತರಿಗೆ ಪರಿಹಾರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲ್ಲಿ ಭತ್ತ ಕೃಷಿ ಹೆಚ್ಚಾಗಿದ್ದು, ಮಳೆ, ನೆರೆ, ಉಪ್ಪು ನೀರಿನ ಅಂಶದಿಂದ ಬೆಳೆಗೆ ಸಾಕಷ್ಟು ಹಾನಿಯಾಗಿದೆ ಎಂದು ರೈತರು ನಮ್ಮಲ್ಲಿ ಅಳಲು ತೋಡಿಕೊಂಡಿದ್ದಾರೆ. ನದಿ, ತೋಡಿನ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ರಾಯಚೂರು, ಬಳ್ಳಾರಿ ಸೇರಿದಂತೆ 13 ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದ ರೈತರಿಗೆ ಸಮಸ್ಯೆಯಾಗಿದೆ, ಈ ಬಗ್ಗೆ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.