ಗುತ್ತಲ: ಹಾವೇರಿ ಜಿಲ್ಲೆಯಲ್ಲಿ ಹರಿದಿರುವ ಪಂಚ ನದಿಗಳಿಂದ ಹಲವು ಏತ ನೀರಾವರಿ ಯೋಜನೆಗಳನ್ನು ಆರಂಭಿಸಲಾಗಿದೆ. ಆದರೆ, ಅವುಗಳಲ್ಲಿ ಶೇ. 50 ಯೋಜನೆಗಳು ಸ್ಥಗಿತವಾಗಿದ್ದು, ಅವುಗಳನ್ನು ಮರು ಆರಂಭಗೊಳಿಸಬೇಕು ಎಂಬ ಆಗ್ರಹ ರೈತ ವಲಯದಿಂದ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ರಾಣೆಬೆನ್ನೂರ ವಿಭಾಗದಲ್ಲಿ 17 ಹಾಗೂ ಹಾನಗಲ್ಲ ವಿಭಾಗದಲ್ಲಿ 14 ಯೋಜನೆಗಳಿವೆ. ಇದರಲ್ಲಿ ರಾಣೆಬೆನ್ನೂರ ವಿಭಾಗದಲ್ಲಿ 6 ಹಾಗೂ ಹಾನಗಲ್ಲ ವಿಭಾಗದಲ್ಲಿ 12 ಯೋಜನೆಗಳು ಸುಸ್ಥಿತಿಯಲ್ಲಿದ್ದು, ಉಳಿದ 13 ಯೋಜನೆಗಳು ಬಂದ್ ಆಗಿವೆ. ಯೋಜನೆಗಾಗಿ ಅಳವಡಿಸಿರುವ ಪೈಪ್ಲೈನ್, ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಅಲ್ಲದೆ, ವಿದ್ಯುತ್, ಸರ್ಕಾರದ ಅನುದಾನ, ಸಿಬ್ಬಂದಿ ಕೊರತೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಯೋಜನೆ ನನೆಗುದಿಗೆ ಬಿದ್ದಿದೆ.
ಜಿಲ್ಲೆಯ ಬಹುತೇಕ ಎಲ್ಲ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳಿವೆ. ರಾಣೆಬೆನ್ನೂರ ವಿಭಾಗದಲ್ಲಿ ಗೌರಾಪುರ ಏತ ನೀರಾವರಿ ಯೋಜನೆಯಲ್ಲಿ 405 ಹೆಕ್ಟೇರ್, ಹಾವನೂರ ಏತ ನೀರಾವರಿ ಯೋಜನೆಯಲ್ಲಿ 1,260 ಹೆಕ್ಟೇರ್, ಯಕ್ಲಾಸಪುರ 2,024 ಹೆಕ್ಟೇರ್, ಜಯಪ್ರಕಾಶ-ಬೇಲೂರ 35 ಹೆಕ್ಟೇರ್, ಅಂಬೇಡ್ಕರ್-ಬೇಲೂರ 40 ಹೆಕ್ಟೇರ್ ಭೂಮಿಗೆ ಹಾಗೂ ದೇವಿಹೊಸೂರ ಬಾಳಿಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆಯಲ್ಲಿವೆ.
ಹಾನಗಲ್ಲ ವಿಭಾಗದಲ್ಲಿ ಮಕರವಳ್ಳಿ-1ರಲ್ಲಿ 500 ಹೆಕ್ಟೇರ್, ಮಕರವಳ್ಳಿ-2ರಲ್ಲಿ 44.64 ಹೆಕ್ಟೇರ್, ಕುಸನೂರ 171.80 ಹೆಕ್ಟೇರ್, ಶೇಷಗಿರಿ 340 ಹೆಕ್ಟೇರ್, ಬ್ಯಾತನಾಳ 66 ಹೆಕ್ಟೇರ್, ಚಿಕ್ಕಹುಲ್ಲಾಳ 9.60 ಹೆಕ್ಟೇರ್, ಲಕ್ಷ್ಮೀಪುರ 73 ಹೆಕ್ಟೇರ್, ಹೊಂಕಣ 38.48 ಹೆಕ್ಟೇರ್, ಕನ್ನೇಶ್ವರ 60.73 ಹೆಕ್ಟೇರ್, ಕುಣಿಮೆಳ್ಳಳ್ಳಿ 216 ಹೆಕ್ಟೇರ್, ಗಲಗಿನಕಟ್ಟಿ ಏತ ನೀರಾವರಿ ಯೋಜನೆಯಲ್ಲಿ 5,060.73 ಹೆಕ್ಟೇರ್ ಜಮೀನು ನೀರಾವರಿ ಪ್ರದೇಶವಾಗಿದೆ ಹಾಗೂ ಮೋತಿ ತಲಾಬ್ ಕೆರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ.
ರಾಣೆಬೆನ್ನೂರ ವಿಭಾಗದಲ್ಲಿ ಗಳಗನಾಥ-ಹುರಳಿಹಾಳ ಏತನೀರಾವರಿ ಯೋಜನೆ, ಮೇವುಂಡಿ, ಐರಣಿ, ಚಿಕ್ಕಕುರವತ್ತಿ, ಕುದರಿಹಾಳ, ನದಿಹರಳಹಳ್ಳಿ, ಮುದೇನೂರ, ನಿಟ್ಟೂರ ಯೋಜನೆಗಳು ಸಂಪೂರ್ಣ ಬಂದ್ ಆಗಿವೆ. ಅಗಸನಮಟ್ಟಿ, ಮೇಡ್ಲೇರಿ ಹಾಗೂ ಚೌಡಯ್ಯದಾನಪುರ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಹಾನಗಲ್ಲ ವಿಭಾಗದಲ್ಲಿ ಮಂಟಗಣಿ ಹಾಗೂ ವಾಸನ ಏತ ನೀರಾವರಿ ಯೋಜನೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಸಂಪೂರ್ಣ ಬಂದ್ ಹಾಗೂ ತಾತ್ಕಾಲಿಕವಾಗಿ ಬಂದ್ ಆಗಿರುವ 13 ಯೋಜನೆಗಳನ್ನು ಮರು ಆರಂಭಿಸಿದರೆ ಸಾವಿರಾರು ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟು ರೈತರ ಬಾಳು ಹಸನಾಗುತ್ತದೆ.
ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಯಿಂದಾಗಿ ಸಾವಿರಾರು ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲೂ ಅನೇಕ ಏತ ನೀರಾವರಿ ಯೋಜನೆಗಳು ಆರಂಭವಾಗಿವೆ. ಬಹುತೇಕ ಕೆರೆಗಳನ್ನು ತುಂಬಿಸುವ ಯೋಜನೆಗಳಿವೆ. ಕೆರೆ, ಕಟ್ಟೆಗಳು ತುಂಬಿದರೆ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರು ಕೊಳವೆ ಬಾವಿಗಳ ಮೂಲಕ ನೀರಾವರಿ ಬೆಳೆ ಬೆಳೆಯಬಹುದು.
ನೀರಾವರಿ ಯೋಜನೆಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿರುವ ಹಳೆಯ ಮೈಸೂರು ಭಾಗದ ರೈತರ ಆಸಕ್ತಿ ಹಾವೇರಿ ಜಿಲ್ಲೆಯ ರೈತರಿಗೆ ನೀರಾವರಿ ಯೋಜನೆಗಳ ಪ್ರಯೋಜನದ ಬಗ್ಗೆಯೂ ಮೂಡಬೇಕಿದೆ. ಹೊಸ ಯೋಜನೆಗಳು ಆರಂಭವಾಗದಿದ್ದರೂ ಬಂದ್ ಆಗಿರುವ ಯೋಜನೆಗಳನ್ನು ಮರು ಆರಂಭಿಸಿದರೆ ರೈತರ ಬದುಕು ಹಸನಾಗಲಿದೆ. ಸಂಬಂಧಿಸಿದ ಜನಪ್ರತಿನಿಧಿಗಳು, ಸರ್ಕಾರ ತುರ್ತು ಗಮನ ಹರಿಸಿ ಬಂದ್ ಆಗಿರುವ ಏತ ನೀರಾವರಿ ಯೋಜನೆಗಳನ್ನು ಮರು ಆರಂಭಿಸಬೇಕು ಎಂದು ರೈತರು ಆಗ್ರಹಪಡಿಸುತ್ತಿದ್ದಾರೆ.
ಬಂದ್ ಆಗಿರುವ ಹಾವೇರಿ ಜಿಲ್ಲೆಯ ಏತ ನೀರಾವರಿ ಯೋಜನೆಗಳ ಮರು ಆರಂಭಕ್ಕೆ ಸಣ್ಣ ನೀರಾವರಿ ಇಲಾಖೆಗೆ ಸಂಪೂರ್ಣ ವರದಿ ಕಳುಹಿಸಲಾಗಿದೆ. ಮರು ಆರಂಭಿಸುವ ಬಗ್ಗೆ ಇಲಾಖೆ ಕೂಡ ಆಸಕ್ತಿ ಹೊಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ.
| ಕೆ.ಸಿ. ಸತೀಶ
ಅಧೀಕ್ಷಕ ಇಂಜಿನಿಯರ್, ಸಣ್ಣ ನೀರಾವರಿ, ಇಲಾಖೆ, ಬೆಳಗಾವಿ
ಜಿಲ್ಲೆಯಲ್ಲಿ ಸ್ಥಗಿತವಾಗಿರುವ 13 ಏತ ನೀರಾವರಿ ಯೋಜನೆಗಳನ್ನು ಪುನಃ ಆರಂಭಿಸಿ, ತುಂಗಾ ಮೇಲ್ದಂಡೆ, ವಿವಿಧ ಏತ ನೀರಾವರಿ ಹಾಗೂ ಜಮೀನುಗಳಲ್ಲಿ ನೀರಾವರಿ ಇಲ್ಲದೆ ಇರುವ ರೈತರ ಜಮೀನುಗಳಿಗೆ ಹಾಗೂ ನೀರಾವರಿ ಇಲ್ಲದೆ ಖಾಲಿ ಉಳಿದ ಜಮೀನುಗಳಿಗೆ ನೀರು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ.
| ಅಶೋಕರಡ್ಡಿ ಮರ್ಚರಡ್ಡೇರ
ರೈತ ಮುಖಂಡ ಬೆಳವಿಗಿ ಗ್ರಾಮ