ಮಡಿಕೇರಿ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ಕೊಡಗು ಜಿಲ್ಲೆಯಲ್ಲಿ ೧೨,೩೬೭ ಕಾರ್ಮಿಕರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ನೋಂದಣಿಯಾಗಿರುವ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ಇದುವರೆಗೆ ೧೨,೩೬೭ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇವರಲ್ಲಿ ೯,೭೪೦ ಪುರುಷರು ಹಾಗೂ ೨,೬೨೭ ಮಹಿಳೆಯರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ನೋಂದಣಿಯಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೩,೦೩೫, ಸೋಮವಾರಪೇಟೆ ತಾಲೂಕಿನಲ್ಲಿ ೪,೦೩೭, ವಿರಾಜಪೇಟೆ ತಾಲೂಕಿನ ೫೨೯೫ ಹೆಸರು ನೋಂದಾಯಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಧನಸಹಾಯ ವಿತರಿಸಲಾಗಿದೆ. ಹೆರಿಗೆ ಧನ ಭತ್ಯೆ, ವೈದ್ಯಕೀಯ ಸಹಾಯಧನ, ಮದುವೆಗೆ ಧನಸಹಾಯ, ಹೀಗೆ ವಿವಿಧ ಯೋಜನೆಗಳಡಿ ಸುಮಾರು ೪೧ ಲಕ್ಷ ರೂ. ಭರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ೭,೧೯,೪೯೨, ಸೋಮವಾರಪೇಟೆ ತಾಲೂಕಿನಲ್ಲಿ ೨೨,೬೬,೨೯೩, ವಿರಾಜಪೇಟೆ ತಾಲೂಕಿನಲ್ಲಿ ೧೨ ಲಕ್ಷ ರೂ. ಭರಿಸಲಾಗಿದೆ. ನೋಂದಾಯಿತ ಫಲಾನುಭವಿಗೆ ವೃತ್ತಿಯಾಧಾರಿತ ಟೂಲ್‌ಕಿಟ್ ಸೌಲಭ್ಯ ನೀಡಲಾಗುತ್ತದೆ. ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನ ನೀಡಲಾಗುತ್ತದೆ. ಹೆಸರು ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನ ನೀಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮೊದಲ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಸಹಾಯಧನ ನೀಡುವ ಯೋಜನೆ ಇದೆ. ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ಅಥವಾ ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ಅಪಘಾತ ಪರಿಹಾರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೊತೆಗೆ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ, ಇ-ಶ್ರಮ ಯೋಜನೆ, ಹೀಗೆ ಹಲವು ಯೋಜನೆಗಳು ಇವೆ ಮಾಹಿತಿ ನೀಡಿದ್ದಾರೆ.