1200 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ

ತುಮಕೂರು: ನಿಷೇಧಿತ ಪ್ಲಾಸ್ಟಿಕ್ ಅನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಿ 1200 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಮಂಡಿಪೇಟೆಯ 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆಯ ಗೋದಾಮಿನಲ್ಲಿ ಅಕ್ರಮವಾಗಿ 1ಲಕ್ಷ ರೂ., ಮೌಲ್ಯದ 1200 ಕೆಜಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿಡಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಮಧ್ಯಾಹ್ನ ಆಯುಕ್ತ ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ.ನಾಗೇಶ್​ಕುಮಾರ್, ಪರಿಸರ ಇಂಜಿನಿಯರ್​ಗಳಾದ ಮೋಹನ್ ಕುಮಾರ್, ಕೃಷ್ಣಮೂರ್ತಿ, ಮೃತ್ಯುಂಜಯ ನೇತೃತ್ವದಲ್ಲಿ ಪಾಲಿಕೆ ತಂಡ ದಾಳಿ ನಡೆಸಿಠ್ಠಿ.

50 ಸಾವಿರ ದಂಡ: ನಿಷೇಧಿತ ಪ್ಲಾಸ್ಟಿಕ್ ಸಂಗ್ರಹ, ಮಾರಾಟಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕ ಅಮ್ಜದ್ ಪಾಷಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಅನ್ನು ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ವಿಲೇವಾರಿಗೆ ಆಯುಕ್ತ ಟಿ.ಭೂಬಾಲನ್ ಕ್ರಮವಹಿಸಿದ್ದಾರೆ.

ಪಾಲಿಕೆ ತಂಡದಲ್ಲಿ ಆರೋಗ್ಯ ನಿರೀಕ್ಷಕರಾದ ಚಿಕ್ಕಸ್ವಾಮಿ, ರುದ್ರೇಶ್, ಆನಂದ್ ಹಾಗೂ ಮಂಜುಳಾ ಇದ್ದರು.

ದಂಡಕ್ಕೆ ಹೆದರದ ಮಾಲೀಕರು!: ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವ ಅಧಿಕಾರಿಗಳು ವಾರದಲ್ಲಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಿದ್ದರೂ ಅಂಗಡಿ ಮಾಲೀಕರು ಮತ್ತೆ ಚಾಳಿ ಮುಂದುವರಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಕಸದ ಸಮಸ್ಯೆ ವಿಪರೀತವಾಗಿರುವ ಮಂಡಿಪೇಟೆ, ಉಪ್ಪಾರಹಳ್ಳಿ, ಶಟ್ಟಿಹಳ್ಳಿ, ರಿಂಗ್ ರಸ್ತೆಗಳಲ್ಲಿ ಓಡಾಡಿಕೊಂಡು ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಕಂಡರೇ ದಂಡಹಾಕಿ ಎಚ್ಚರಿಕೆ ನೀಡಲಾಗುತ್ತಿದೆ.

1,62,700 ರೂ., ದಂಡ !: ನಿಷೇಧಿತ ಪ್ಲಾಸ್ಟಿಕ್ ಬಳಕೆ, ಮಾರಾಟ, ನಿಷೇಧಿತ ಸ್ಥಳದಲ್ಲಿ ಕಸ ಎಸೆಯುವುದು, ಒಣ ಕಸ, ಹಸಿಕಸ ಬೇರ್ಪಡಿಸದೇ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜು.1 ರಿಂದ 6 ರವರೆಗೆ 1 ವಾರದೊಳಗೆ 1,62,700 ರೂ., ದಂಡವನ್ನು ಪಾಲಿಕೆ ವಿಧಿಸಿದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಸಂಗ್ರಹ ವಿರುದ್ಧ ಪಾಲಿಕೆ ಸಿಬ್ಬಂದಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಡ್ರೋನ್ ಕಣ್ಣು ..: ಎಲ್ಲೆಂದರಲ್ಲಿ ಕಸ ಎಸೆಯುವರ ಮೇಲೆ ಮಹಾನಗರ ಪಾಲಿಕೆ ಹದ್ದಿನ ಕಣ್ಣು ಇಡಲು ‘ಡ್ರೋನ್’ ಕ್ಯಾಮೆರಾಗಳನ್ನು ಬಳಸುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 8 ಕಿ.ಮೀ., ಅಂತರದವರೆಗೂ ಒಂದು ಡ್ರೋನ್ ಕ್ಯಾಮರಾವನ್ನು ಬಳಸಬಹುದಾಗಿದ್ದು, ಒಂದೆಡೆ ಕುಳಿತು ಎಲ್ಲೆಂದರಲ್ಲಿ ಕಸ ಎಸೆಯುವರನ್ನು ವೀಡಿಯೋ ಮೂಲಕ ಪತ್ತೆಹಚ್ಚಬಹುದಾಗಿದೆ. ಈ ಮಾಹಿತಿ ಪಾಲಿಕೆಯ ಆಯುಕ್ತ ಸೇರಿ ಹಿರಿಯ ಅಧಿಕಾರಿಗಳ ಮೊಬೈಲ್​ಗೆ ತತ್​ಕ್ಷಣವೇ ರವಾನೆಯಾಗಲಿದೆ.

Leave a Reply

Your email address will not be published. Required fields are marked *