| ರಾಯಣ್ಣ ಆರ್.ಸಿ. ಬೆಂಗಳೂರು
ರಾಜ್ಯದ ದೊಡ್ಡ ವಿವಿಗಳಲ್ಲಿ ಒಂದಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್ಸಿಯು) ಕುಲಪತಿ ಹುದ್ದೆಗೆ ಆಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದ್ದು, 120ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಸರ್ಕಾರ ಈಗಾಗಲೆ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಾತಿ ಮಾಡಲು ಶೋಧನಾ ಸಮಿತಿಯನ್ನು ನೇಮಕ ಮಾಡಿದ್ದು, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಬೋರಲಿಂಗಯ್ಯ ಸಮಿತಿ ಅಧ್ಯಕ್ಷರಾಗಿದ್ದಾರೆ. ವಿಟಿಯು ಕುಲಪತಿ ವಿದ್ಯಾಶಂಕರ ಎಸ್. ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಪಟ್ಟಿಯಲ್ಲಿರುವ ಪ್ರಮುಖರು: ಆರ್ಸಿಯು ಹಂಗಾಮಿ ಕುಲಪತಿ ಡಾ. ವಿ.ಎಫ್.ನಾಗಣ್ಣವರ, ಎಚ್.ವೈ.ಕಾಂಬಳೆ, ರಾಜನಾಲ್ಕರ್ ಲಕ್ಷ್ಮಣ, ಡಾ. ಶಿವಪುತ್ರ ಹುರಕಡ್ಲಿ, ಮೈಸೂರು ಕರಾಮುವಿವಿ ಡಾ. ಹಣುಮಂತಪ್ಪ, ಮೈಸೂರು ವಿವಿ ಪ್ರೋ.ಲಕ್ಷ್ಮೀ, ಧಾರವಾಡ ಕರ್ನಾಟಕ ವಿವಿಯ ಡಾ. ಎಸ್.ಬಾಗಲಕೋಟೆ, ಕಲಬುರಗಿ ವಿವಿಯ ಡಾ. ಎಚ್.ಟಿ. ಪೋಟೆ, ಡಾ. ಬಸವರಾಜ ಪದ್ಮಸಾಲಿ, ಡಿ.ಎನ್.ಪಾಟೀಲ ಸೇರಿ 120ಕ್ಕೂ ಹೆಚ್ಚು ಆಕಾಂಕ್ಷಿಗಳು ಪಟ್ಟಿಯಲ್ಲಿದ್ದಾರೆ.
ಅತಿದೊಡ್ಡ ವಿವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಭೌಗೋಳಿಕವಾಗಿ ಮತ್ತು ಕಾಲೇಜುಗಳ ಸಂಖ್ಯೆಯ ವಿಚಾರದಲ್ಲಿ ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಪಡೆದಿದೆ. ಬೆಳಗಾವಿ, ವಿಜಯಪುರ ಜಿಲ್ಲೆಗಳ 350 ಕಾಲೇಜುಗಳು ಈ ವಿವಿ ಜತೆ ಸಂಯೋಜನೆಗೊಂಡಿದ್ದು, 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಸಮರ್ಥ ಕುಲಪತಿ ಅಗತ್ಯ: ಪ್ರಾದೇಶಿಕ ಅಸಮಾನತೆ ನಿವಾರಿಸಬೇಕೆಂಬ ಸದುದ್ದೇಶದಿಂದ 1982ರಲ್ಲಿ ಖ್ಯಾತ ಅರ್ಥಶಾಸ್ತ್ರ ಡಾ. ಡಿ.ಎಂ.ನಂಜುಂಡಪ್ಪ, ಧಾರವಾಡ ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿದ್ದರು. ಆದರೆ, ಅದು ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಗಬೇಕಾದರೇ ಮೂರು ದಶಕಗಳೇ ಕಳೆದವು. 2010ರಲ್ಲಿ ರಾಜ್ಯ ಸರ್ಕಾರ ರಾಣಿ ಚನ್ನಮ್ಮ ವಿವಿಯನ್ನು ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಸ್ಥಾಪನೆ ಮಾಡಿದೆ. ಇದು ಅರಣ್ಯ ಪ್ರದೇಶದ ಭೂಮಿಯಲ್ಲಿ ಇದೆ ಎಂಬ ವ್ಯಾಜ್ಯ ಕೇಂದ್ರ ಅರಣ್ಯ ಇಲಾಖೆಯಲ್ಲಿ ಪ್ರಕರಣ ನೆನಗುದಿಗೆ ಬಿದ್ದಿತ್ತು. ಹಾಗಾಗಿ ವಿಶ್ವವಿದ್ಯಾಲಯ ಪ್ರಾರಂಭವಾಗಿ 13 ವರ್ಷ ಕಳೆದರೂ ಇನ್ನೂ ಸ್ವತಂತ್ರ ಕಟ್ಟಡದ ಭಾಗ್ಯ ದೊರೆತಿಲ್ಲ. ಡಾ. ಬಿ.ಆರ್.ಅನಂತನ್, ಡಾ. ಶಿವಾನಂದ ಹೊಸಮನಿ, ಡಾ. ರಾಮಚಂದ್ರಗೌಡ ಕುಲಪತಿಗಳಾಗಿ ಅಧಿಕಾರ ನಡೆಸಿದ್ದಾರೆ. ಆದರೆ, ಅತ್ಯಾಧುನಿಕ ಹಾಗೂ ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಕ್ರಾಂತಿಯನ್ನಾಗಿಸುವ ವಿಶ್ವವಿದ್ಯಾಲಯವನ್ನಾಗಿ ಬೆಳೆಸುವ ಕನಸು ಈಡೇರಿಲ್ಲ. ಇಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನತೆ ಮಕ್ಕಳೇ ಹೆಚ್ಚಿರುವುದರಿಂದ ಪ್ರಚಲಿತ ವಿದ್ಯಮಾನಗಳ ಕುರಿತು ಪಠ್ಯಪರಿಷ್ಕರಣೆ ಆಗದೇ ಹಳೇ ಕಾಲದ ಪಠ್ಯಕ್ರಮವನ್ನೇ ಬೋಧಿಸ ಲಾಗುತ್ತಿದೆ. ಅದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ಹೆಸರಿನಲ್ಲಿ ಪ್ರಾರಂಭಿಸಿರುವ ಈ ವಿವಿಗೆ ಒಬ್ಬ ದಕ್ಷ ಹಾಗೂ ದೂರದೃಷ್ಟಿಯ ಕುಲಪತಿಯನ್ನು ನೇಮಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ರಾಣಿ ಚನ್ನಮ್ಮ ವಿವಿ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ಅಧ್ಯಕ್ಷ ಡಾ.ಬೋರಲಿಂಗಯ್ಯ ಇನ್ನೂ ಶೋಧನಾ ಸಮಿತಿ ಸಭೆ ಕರೆದಿಲ್ಲ. ಹಾಗಾಗಿ ಆಕ್ಷಾಂಕಿಗಳ ಬಗ್ಗೆ ಇನ್ನೂ ಚರ್ಚೆಗಳು ಆಗಿಲ್ಲ. ಸಭೆಯ ಬಳಿಕವೇ ಸ್ಪಷ್ಟ ನಿರ್ಧಾರ ಗೊತ್ತಾಗಲಿದೆ.
| ಡಾ. ವಿದ್ಯಾಶಂಕರ್ ಎಸ್., ವಿಟಿಯು ಕುಲಪತಿ, ಶೋಧನಾ ಸಮಿತಿ ಸದಸ್ಯರು
ಒಂದೇ ಸಮುದಾಯಕ್ಕೆ ಮಣೆ: ಹಂಗಾಮಿ ಕುಲಪತಿ, ಕುಲಸಚಿವರು (ಆಡಳಿತ ವಿಭಾಗ), ಉಪಕುಲಸಚಿವರು, ಸಹಾಯಕ ಕುಲಸಚಿವರು, ಹಣಕಾಸು ಅಧಿಕಾರಿಗಳು, ಕಚೇರಿ ಅಧೀಕ್ಷಕರು ಸೇರಿ ಆಡಳಿತದ ಚುಕ್ಕಾಣಿ ಒಂದೇ ಸಮುದಾಯದ ಅಧಿಕಾರಿಗಳ ಕೈಯಲ್ಲಿ ಸಿಕ್ಕಿರುವುದರಿಂದ ಆಡಳಿತದ ಒಳಗೊಳಗೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಕೆಲವರಿಗೆ ಮೇಲಿಂದ ಮೇಲೆ ಮೆಮೋ ಕೊಡುವುದು ಚಾಲ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಸಾಮಾಜಿಕ ನ್ಯಾಯ ಕೊಡುವುದಕ್ಕಾಗಿ ಎಲ್ಲರಿಗೂ ಅವಕಾಶ ನೀಡಬೇಕೆಂದು ಕೆಲವು ಪ್ರಾಧ್ಯಾಪಕರು ಪ್ರತಿಪಾದಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಂ. ಸುರೇಶ್ ಆಯ್ಕೆ