ಆ್ಯಶಸ್​ ಸರಣಿಗೆ ಬ್ರಿಟನ್​ಗೆ ಕರೆದೊಯ್ಯಲು ಅಪ್ಪ 73 ಸಾವಿರ ರೂ. ದುಡಿವ ಗುರಿ ಕೊಟ್ಟರು, ಪುತ್ರ ಅದನ್ನು ಸಾಧಿಸಿದ್ದೇಗೆ ಗೊತ್ತಾ…?

ಮ್ಯಾಂಚೆಸ್ಟರ್​: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ನಡೆಯುವ ಆ್ಯಶಸ್​ ಕ್ರಿಕೆಟ್​ ಸರಣಿಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಟೆಸ್ಟ್​ ಪಂದ್ಯ ಸೇರಿ ಯಾವುದೇ ಕ್ರಿಕೆಟ್​ ಪಂದ್ಯಗಳು ಭಾರಿ ಜನಾಕರ್ಷಣೆಯನ್ನು ಹೊಂದಿವೆ. ಮೈದಾನದಲ್ಲಿ ಕುಳಿತು ಈ ಪಂದ್ಯಗಳನ್ನು ನೋಡಲು ಹಾತೊರೆಯುವವರ ಸಂಖ್ಯೆ ಬಹುದೊಡ್ಡದು. ಸ್ಟೇಡಿಯಂನಲ್ಲಿ ಕುಳಿತು ತಮ್ಮ ನೆಚ್ಚಿನ ಆಟಗಾರರು ಪಂದ್ಯದಲ್ಲಿ ಸೆಣಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೊಡ್ಡ ಮೊತ್ತವನ್ನು ತೆತ್ತು ಟಿಕೆಟ್​ ಖರೀದಿಸಲು ಜನರು ಹಿಂಜರಿಯುವುದಿಲ್ಲ.

ಆಸ್ಟ್ರೇಲಿಯಾದ 12 ವರ್ಷದ ಪೋರನಿಗೂ ಬ್ರಿಟನ್​ಗೆ ತೆರಳಿ ಆ್ಯಶಸ್​ ಕ್ರಿಕೆಟ್​ ಪಂದ್ಯ ವೀಕ್ಷಿಸಬೇಕು ಎಂಬ ಆಸೆ ಇತ್ತು. ಇದಕ್ಕಾಗಿ ಆತನ ತಂದೆ 73,516 ರೂ. (1,500 ಆಸ್ಟ್ರೇಲಿಯನ್​ ಡಾಲರ್​) ಗಳಿಸಿದರೆ ಮಾತ್ರ ಬ್ರಿಟನ್​ಗೆ ಕರೆದೊಯ್ದು ಪಂದ್ಯ ತೋರಿಸುವುದಾಗಿ ಸವಾಲು ಹಾಕಿದರು. ಇದಕ್ಕಾಗಿ ನಾಲ್ಕು ವರ್ಷ ಸತತ ಶ್ರಮಿಸಿದ ಆತ ಕೊನೆಗೂ ಮ್ಯಾಂಚೆಸ್ಟರ್​ಗೆ ತೆರಳಿ ಪಂದ್ಯವನ್ನು ವೀಕ್ಷಿಸಿದ. ತನ್ನ ನೆಚ್ಚಿನ ತಾರಾ ಆಟಗಾರರಾದ ಸ್ಟೀವ್​ ವಾ, ಜಸ್ಟಿನ್​ ಲಾಂಗರ್​, ನಾಥನ್​ ಲ್ಯಾನ್​, ಸ್ಟೀವ್​ ಸ್ಮಿತ್​ ಮತ್ತು ಪ್ಯಾಟ್​ ಕಮ್ಮಿನ್ಸ್​ ಜತೆ ಒಡನಾಡಿ ಅವರೊಂದಿಗೆ ಪಂದ್ಯವನ್ನು ವೀಕ್ಷಿಸಿದ್ದು ಆತನ ಸಂಭ್ರಮವನ್ನು ಇಮ್ಮಡಿಗೊಳಿಸಿತು.

ಹಾಗಾದರೆ ತನ್ನ ಕನಸನ್ನು ಈಡೇರಿಸಿಕೊಳ್ಳಲು 73,516 ಸಾವಿರ ರೂ. ಗಳಿಸಿದ್ದು ಹೇಗೆ? ತಾನು ವಾಸವಿದ್ದ ಬಡಾವಣೆಯಲ್ಲಿ ವಾರಾಂತ್ಯದಲ್ಲಿ ಮನೆ, ಮನೆ ಕಸವನ್ನು ಎತ್ತಿದ! ಪ್ರತಿ ಮನೆಯಿಂದಲೂ 49 ರೂ. ನಂತೆ (1 ಆಸ್ಟ್ರೇಲಿಯನ್​ ಡಾಲರ್​) ಆ ಬಾಲಕ ಸತತ 4 ವರ್ಷ ಹಣ ಸಂಗ್ರಹಿಸಿದ!

ಆಸ್ಟ್ರೇಲಿಯಾದ ವಿಕ್ಟೋರಿಯಾದ ದಕ್ಷಿಣ ಕರಾವಳಿಯ ನಿವಾಸಿ ಮ್ಯಾಕ್ಸ್​ ವೇಟ್​ (12) ಈ ಸಾಧನೆ ಮಾಡಿದ ಬಾಲಕ. 2015ರ ವಿಶ್ವಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ತವರಿನ ತಂಡ ವಿಶ್ವಕಪ್​ ಜಯಿಸಿದ್ದನ್ನು ಮೈದಾನದಲ್ಲಿ ಕುಳಿತು ನೋಡಿ ಸಂಭ್ರಮಿಸಿದ್ದ. ಅಂದೇ ಬ್ರಿಟನ್​ನಲ್ಲಿ ನಡೆಯುವ ಆ್ಯಶಸ್​ ಸರಣಿಯ ಟೆಸ್ಟ್​ ಪಂದ್ಯವನ್ನು ನೋಡುವ ಬಯಕೆ ಈತನಲ್ಲಿ ಮೂಡಿತ್ತು. ಅದನ್ನು ಆತ ತನ್ನ ತಂದೆ ಡೇಮಿಯೆನ್​ ಬಳಿ ಹೇಳಿಕೊಂಡಿದ್ದ.

ಪುತ್ರನ ಆಸೆ ಈಡೇರಿಸಬೇಕು ಎಂದು ಡೇಮಿಯೆನ್​ಗೆ ಅನಿಸಿತ್ತಾದರೂ ಆತನ ಆರ್ಥಿಕ ಪರಿಸ್ಥಿತಿ ಅದಕ್ಕೆ ಸಹಕರಿಸಿರಲಿಲ್ಲ. ಜತೆಗೆ ಪುತ್ರನಿಗೆ ಬದುಕಿನ ಪಾಠ ಹೇಳಿಕೊಡಬೇಕೆಂಬ ಬಯಕೆಯಿಂದ 1,500 ಆಸ್ಟ್ರೇಲಿಯನ್​ ಡಾಲರ್​ ಹಣ ಗಳಿಸಿದ್ದೇ ಆದರೆ, ಬ್ರಿಟನ್​ಗೆ ಕರೆದೊಯ್ಯುವುದಾಗಿ ಪುತ್ರನಿಗೆ ಹೇಳಿದ್ದರು. ಪುತ್ರ ಕೂಡ ಆ ಸವಾಲನ್ನು ಸ್ವೀಕರಿಸಿದ್ದ.

ಆದರೆ ಹಣ ಗಳಿಸುವುದಾದರೂ ಹೇಗೆ? ಮ್ಯಾಕ್ಸ್ ಬಳಿ ಈ ಪ್ರಶ್ನೆಗೆ ತಕ್ಷಣವೇ ಉತ್ತರ ದೊರೆತಿರಲಿಲ್ಲ. ಹಾಗಾಗಿ ಆತ ಈ ವಿಷಯವಾಗಿ ತನ್ನ ತಾಯಿಯ ಜತೆ ಚರ್ಚಿಸಿದ್ದ. ಅದಕ್ಕೆ ಆಕೆ, ವಾರಂತ್ಯಗಳಲ್ಲಿ ಬಡಾವಣೆಯಲ್ಲಿರುವ ಮನೆಗಳಿಂದ ಕಸದ ಡಬ್ಬಿಗಳನ್ನು ಸಾಗಿಸುವ ಕೆಲಸ ಮಾಡಿ, ಪ್ರತಿ ಮನೆಯಿಂದ 1 ಆಸ್ಟ್ರೇಲಿಯನ್​ ಡಾಲರ್​ ಶುಲ್ಕ ಸಂಗ್ರಹಿಸುವ ಸಲಹೆ ನೀಡಿದರು. ಮ್ಯಾಕ್ಸ್​ಗೆ ಇದು ಒಪ್ಪಿತವಾಗಿತ್ತು.

ತಕ್ಷಣವೇ ಆತ ತನ್ನ ಬಡಾವಣೆಯ ಪ್ರತಿ ಮನೆಯವರಿಗೂ ಇ-ಮೇಲ್​ ರವಾನಿಸಿ, ಆ್ಯಶಸ್​ ಸರಣಿಯ ಕ್ರಿಕೆಟ್​ ಪಂದ್ಯ ವೀಕ್ಷಣೆಗೆ ಬ್ರಿಟನ್​ಗೆ ಹೋಗಬೇಕೆಂದಿರುವ ಆಸೆಯನ್ನು ಅರುಹಿಕೊಂಡು, ವಾರಾಂತ್ಯದಲ್ಲಿ ಕಸದ ಡಬ್ಬಿಗಳನ್ನು ಸಾಗಿಸುವ ಕೆಲಸ ಮಾಡಲು ನಿರ್ಧರಿಸಿರುವುದಾಗಿಯೂ, ಇದಕ್ಕೆ 1 ಆಸ್ಟ್ರೇಲಿಯನ್​ ಡಾಲರ್​ ಶುಲ್ಕ ಕೊಟ್ಟು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದ. ಬಡಾವಣೆಯ ಎಲ್ಲ ಮನೆಯವರು ಇದಕ್ಕೆ ಸಮ್ಮತಿಸಿದ್ದರು.

ಸತತ ನಾಲ್ಕು ವರ್ಷ ಈ ಕೆಲಸ ಮಾಡಿದ ಮ್ಯಾಕ್ಸ್​ನ ಬಳಿ 1,500 ಆಸ್ಟ್ರೇಲಿಯನ್​ ಡಾಲರ್​ ಹಣ ಸಂಗ್ರಹವಾಗಿತ್ತು. ಇದರಿಂದ ಸಂತಸಗೊಂಡ ಡೇಮಿಯೆನ್​ ತನ್ನ ಪುತ್ರನನ್ನು ಬ್ರಿಟನ್​ನ ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಆ್ಯಶಸ್​ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯ ತೋರಿಸಲು ಪುತ್ರನನ್ನು ಕರೆದುಕೊಂಡು ಹೋಗಿದ್ದರು.

ಪಂದ್ಯ ವೀಕ್ಷಿಸಲು ಬಾಲಕ ಪಟ್ಟ ಶ್ರಮ ತಿಳಿಯುತ್ತಲೇ ಸಂತಸಗೊಂಡ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮ್ಯಾನೇಜರ್​ ಟೀಮ್​ ಬಸ್​ನಲ್ಲೇ ಮ್ಯಾಕ್ಸ್​ನನ್ನು ಓಲ್ಡ್​ ಟ್ರ್ಯಾಫೋರ್ಡ್​ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದಲ್ಲದೆ, ತಂಡದ ಆಟಗಾರರ ಜತೆ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಟ್ಟರು. ಜತೆಗೆ ತಂಡದ ಆಟಗಾರರೆಲ್ಲರ ಸಹಿ ಇರುವ ಆಸ್ಟ್ರೇಲಿಯಾ ತಂಡದ ಜೆರ್ಸಿಯನ್ನು ಬಳುವಳಿಯಾಗಿ ಕೊಟ್ಟರು. (ಏಜೆನ್ಸೀಸ್​)

Leave a Reply

Your email address will not be published. Required fields are marked *