More

    ಕ್ರಿಕೆಟ್ ಆಟದ ಗಲಾಟೆ ವೇಳೆ ಕೊಲೆ| 12 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ !

    ಹುಬ್ಬಳ್ಳಿ: ಇಲ್ಲಿನ ನೆಹರು ಮೈದಾನದಲ್ಲಿ 2013ರಲ್ಲಿ ಕ್ರಿಕೆಟ್ ಆಡುವ ವಿಚಾರವಾಗಿ ಜಗಳ ತೆಗೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣದ 12 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂ. ದಂಡ ವಿಧಿಸಿ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.

    ಬಾನಿ ಓಣಿ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಢ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ ಉಪ್ಪಾರ, ಶ್ರೀಪಾದ ಪೂಜಾರಿ, ವಿಶಾಲ ಜಾಧವ, ಅಜಯ ಗುತ್ತಲ, ಸಂತೋಷ ಸುನಾಯಿ, ಮಂಜುನಾಥ ಗೋಕಾಕ, ಅನೀಲ ಸಾವಂತ ಶಿಕ್ಷೆಗೀಡಾದವರು. ಯಲ್ಲಾಪುರ ಓಣಿಯ ನಜೀರ ಹುಸೇನಸಾಬ ಮುದಗಲ್ (23) ಹತ್ಯೆಯಾಗಿದ್ದ ವ್ಯಕ್ತಿ.

    ಶಹರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್​ಪೆಕ್ಟರ್ ಎಸ್.ಎಂ. ಸಂದಿಗವಾಡ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪಿಎಸ್​ಐ ಆರ್.ಎಸ್. ಲಮಾಣಿ ತನಿಖೆ ನಡೆಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು, ಡಿ.23ರಂದು 12 ಜನರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. 12 ಜನರಿಗೂ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದ್ದಾರೆ. ಅದರಲ್ಲಿ 6 ಲಕ್ಷ ರೂ. ಮೃತನ ಕುಟುಂಬದವರಿಗೆ ಪರಿಹಾರ ರೂಪದಲ್ಲಿ ಕೊಡಬೇಕು. 65 ಸಾವಿರ ರೂ. ಸರ್ಕಾರಕ್ಕೆ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಡಿ.ಎ. ಭಾಂಡೇಕರ ವಾದ ಮಂಡಿಸಿದ್ದರು.

    ಕೊಲೆ ಪ್ರಕರಣದ ವಿವರ: ಯಲ್ಲಾಪುರ ಓಣಿ ಮೆಹಬೂಬ ನಗರ ನಿವಾಸಿ ಮೌಲಾಲಿ ಹುಸೇನಸಾಬ ಮುದಗಲ್ ಜೂನ್ 16, 2013ರಂದು ಸ್ನೇಹಿತರ ಜತೆ ನೆಹರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ. ಪಕ್ಕದಲ್ಲೇ ಇದ್ದ ಬಾನಿ ಓಣಿಯ 12 ಯುವಕರ ತಂಡ, ಮೌಲಾಲಿ ತಂಡದ ಬಳಿ ಬಂದು ಕ್ಷುಲ್ಲಕ ಕಾರಣಕ್ಕೆ ತಂಟೆ ತೆಗೆದಿತ್ತು. ಕ್ರಿಕೆಟ್ ಬ್ಯಾಟ್, ಸ್ಟಂಪ್​ನಿಂದ ಹೊಡೆದು ಗಾಯಗೊಳಿಸಿದ್ದರು.

    ಬಳಿಕ ಮೈದಾನದ ಬಳಿ ಬಂದಿದ್ದ ಮೌಲಾಲಿ ಸಹೋದರರಾದ ಸೈಯದ್, ಬಷೀರ ಮೇಲೂ ಹಲ್ಲೆ ನಡೆಸಿದ್ದರು. ಅವರು ತಪ್ಪಿಸಿಕೊಂಡು ಚಿಟಗುಪ್ಪಿ ವೃತ್ತದ ಬಳಿ ಬಂದಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಮೌಲಾಲಿಯ ಮತ್ತೋರ್ವ ಸಹೋದರ ನಜೀರ್ ಮುದಗಲ್​ನಿಗೆ, ಕಲ್ಲಪ್ಪ ಶಿರಕೋಳ ಎಂಬಾತ ಚಾಕುವಿನಿಂದ ಇರಿದಿದ್ದ. ಮತ್ತೋರ್ವ ಸ್ಟಂಪ್​ನಿಂದ ಹೊಡೆದಿದ್ದ. ಗಾಯಾಳುಗಳನ್ನು ಕಿಮ್ಸ್​ಗೆ ದಾಖಲಾಗಿತ್ತು. ನಜೀರ್ ಚಿಕಿತ್ಸೆ ಫಲಿಸದೇ ಜೂನ್ 24ರಂದು ಮೃತಪಟ್ಟಿದ್ದ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts