12 ದಿನದಲ್ಲಿ ವರ್ಷದ ಅರ್ಧದಷ್ಟು ಮಳೆ…!

ಹಾವೇರಿ: ಆ. 1ರಿಂದ 12ರವರ ಅವಧಿಯಲ್ಲಿ ಜಿಲ್ಲೆಯ ವಾರ್ಷಿಕ ಮಳೆಯ ಅರ್ಧದಷ್ಟು ಮಳೆ ಜಿಲ್ಲೆಯಾದ್ಯಂತ ಸುರಿದಿದೆ…!

ಜಿಲ್ಲೆಯಲ್ಲಿ ಆ. 1ರಿಂದ ಸತತವಾಗಿ ಜಿಟಿಜಿಟಿಯಾಗಿ ಆರಂಭಗೊಂಡ ಮಳೆ ಆ. 4ರಿಂದ 11ರವರೆಗೆ ರಭಸವಾಗಿ ಸುರಿಯಿತು. ಇದರ ಜೊತೆಗೆ ತುಂಗಭದ್ರಾ ಹಾಗೂ ವರದಾ ನದಿಗಳು ಆರಂಭಗೊಳ್ಳುವ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಮಳೆಯಾಯಿತು. ಇದರ ಪರಿಣಾಮ ಜಿಲ್ಲೆಯಲ್ಲಿ ಬರೋಬ್ಬರಿ 70 ಗ್ರಾಮಗಳು ಪ್ರವಾಹ ಪೀಡಿತವಾಗುವಂತಾಯಿತು.

ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆ 792.7 ಮಿ.ಮೀ.ನಷ್ಟಿದೆ. ಅದರಲ್ಲಿ ಆ. 1ರಿಂದ 12ರ ಅವಧಿಯಲ್ಲಿ 362.1 ಮಿ.ಮೀ. ಸುಮಾರು ಅರ್ಧದಷ್ಟು ಮಳೆ 12 ದಿನಗಳಲ್ಲಿ ಸುರಿದಿದೆ. ಅದರಲ್ಲಿ ಹಾನಗಲ್ಲ ತಾಲೂಕಿನಲ್ಲಿ ಅತಿಹೆಚ್ಚು 584.6 ಮಿ.ಮೀ., ಶಿಗ್ಗಾಂವಿ 448.7, ಸವಣೂರ 341.4, ಹಾವೇರಿ 340, ಹಿರೇಕೆರೂರ 307, ಬ್ಯಾಡಗಿ 292,2, ರಾಣೆಬೆನ್ನೂರ 220.7 ಮಿ.ಮೀ.ನಷ್ಟು ಮಳೆಯಾಗಿದೆ. ಈ ರಣಭೀಕರ ಮಳೆಯಿಂದಾಗಿಯೇ ಜಿಲ್ಲೆಯಾದ್ಯಂತ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 8 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಇತಿಹಾಸದ 2 ದಶಕಗಳ ಅವಧಿಯಲ್ಲಿ ಅಲ್ಪ ಅವಧಿಯಲ್ಲಿಯೇ ಇಷ್ಟೊಂದು ಪ್ರಮಾಣದ ಮಳೆ ಸುರಿದ ಉದಾಹರಣೆಯೇ ಇಲ್ಲ.

ವರದಾ, ತುಂಗಭದ್ರಾದಿಂದ ಅಪಾರ ಹಾನಿ: ಜಿಲ್ಲೆಯಲ್ಲಿ ಹರಿದಿರುವ ವರದಾ ಹಾಗೂ ತುಂಗಭದ್ರಾ ನದಿಪಾತ್ರದಲ್ಲಿ ಜುಲೈ ಅಂತ್ಯದಲ್ಲಿಯೇ ಮಳೆಯಾಗುತ್ತಿದ್ದ ಪರಿಣಾಮ ಜಿಲ್ಲೆಯಲ್ಲಿ ಮಳೆಯಿಲ್ಲದೇ ಇದ್ದರೂ ನದಿಗಳಲ್ಲಿನ ನೀರಿನ ಹರಿವು ಹೆಚ್ಚಿತ್ತು. ಕೆಲ ಬ್ಯಾರೇಜ್​ಗಳು ತುಂಬಿ ಹರಿಯಲು ಆರಂಭಿಸಿದ್ದವು. ಯಾವಾಗ ಜಿಲ್ಲೆಯಲ್ಲಿಯೂ ರಭಸದ ಮಳೆ ಆರಂಭಗೊಂಡಿತೋ ಆಗ ಪ್ರವಾಹ ಹೆಚ್ಚಿ ಜನಜೀವನ ಕೊಚ್ಚಿ ಹೋಗುವಂತಾಯಿತು.

Leave a Reply

Your email address will not be published. Required fields are marked *