12ರಲ್ಲಿ ಕೇವಲ 2 ಕಾಮಗಾರಿಗಳು ಪ್ರಾರಂಭ; ಸಚಿವ ದೇಶಪಾಂಡೆ ಅಸಮಾಧಾನ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಳೆದ ಸಾಲಿನಲ್ಲಿ ಮಂಜೂರಾದ 12 ಕಾಮಗಾರಿಗಳಲ್ಲಿ ಕೇವಲ 2 ಕಾಮಗಾರಿಗಳು ಪ್ರಾರಂಭವಾದ ಬಗ್ಗೆ ಸಚಿವ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರ ಎಲ್ಲ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಆಕರ್ಷಕ ಪ್ರವಾಸೋದ್ಯಮಕ್ಕಾಗಿ ಒಂದೆರಡು ಯೋಜನೆ ಹಾಕಿಕೊಂಡು ಕಾನೂನಾತ್ಮಕವಾಗಿ ಪ್ರವಾಸೋದ್ಯಮ ಬೆಳಸಬೇಕು ಎಂದು ಸೂಚಿಸಿದರು. ಉಳವಿ ಮಹಾದ್ವಾರ, ಅಣಶಿ ಯಾತ್ರಿನಿವಾಸ ಮತ್ತು ಪ್ರಗತಿಯಲ್ಲಿರುವ ಇನ್ನುಳಿದ ಕಾಮಗಾರಿಗಳನ್ನು 2 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಸಿದ್ಧ ಮಾಡಿ ಎಂದರು. ಕಾರವಾರ ಕೋಡಿಬಾಗ ಅಂಚಿನಲ್ಲಿ ಕಾಳಿ ರೀವರ್ ಉದ್ಯಾನಕ್ಕೆ ಆಗಮಿಸುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಿರುವುದನ್ನು ಸಭೆಯ ಗಮನಕ್ಕೆ ತಂದಾಗ, ಉದ್ಯಾನದ ಎಡಭಾಗದಲ್ಲಿ ಸಿಆರ್​ರೆಡ್ ನಿಯಮಾವಳಿಯಂತೆ ವಾಹನ ನಿಲುಗಡೆ ಪ್ರದೇಶಕ್ಕಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು. ಡಿಸಿ ಡಾ. ಹರೀಶಕುಮಾರ ಕೆ., ಜಿಪಂ ಸಿಇಒ ಎಂ. ರೋಶನ್, ಎಸ್​ಪಿ ವಿನಾಯಕ ಪಾಟೀಲ, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು.

ವನಮಹೋತ್ಸವ: ಕಾರವಾರದ ಸದಾಶಿವಗಡ ಶಿವಾಜಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ವನಮಹೋತ್ಸವ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಗಿಡ ನೆಟ್ಟು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಡಿಎಫ್​ಒ ವಸಂತ ರೆಡ್ಡಿ, ಎಸಿಎಫ್ ಮಂಜುನಾಥ ನಾವಿ, ಡಿಡಿಪಿಐ ಮಂಜುನಾಥ, ಮಾಜಿ ಶಸಕ ಸತೀಶ ಸೈಲ್, ಚಿತ್ತಾಕುಲಾ ಗ್ರಾಪಂ ಅಧ್ಯಕ್ಷ ರಾಜು ತಾಂಡೇಲ ಇದ್ದರು.

Leave a Reply

Your email address will not be published. Required fields are marked *