ಮದ್ದೂರು: ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 12ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

ಮಂಡ್ಯ ತಾಲೂಕು ಬಸರಾಳು ಹೋಬಳಿ ಚನ್ನಾಪುರ ಗ್ರಾಮದ ರಾಜು ಅವರ ಕುರಿಗಳು ಮೃತಪಟ್ಟಿರುವುದು. ರಾಜು ಅವರು ಕುರಿಗಳಿಗೆ ಮೇವು ಹುಡಿಕೊಂಡು ಸುಮಾರು 250ಕ್ಕೂ ಹೆಚ್ಚು ಕುರಿಗಳೊಂದಿಗೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಶುಕ್ರವಾರ ಬಂದಿದ್ದರು. ಮಧ್ಯಾಹ್ನದ ನಂತರ ಮೇವು ತಿಂದ ಬಳಿಕ ಅಲ್ಲಿಯೇ ಇದ್ದ ಚರಂಡಿ ನೀರನ್ನು ಕುರಿಗಳು ಕುಡಿದಿವೆ. ನೀರು ಕುಡಿದು ಕೆಲ ಹೊತ್ತಿನಲ್ಲೇ 12ಕ್ಕೂ ಹೆಚ್ಚು ಕುರಿಗಳು ನರಳಿ ಮೃತಪಟ್ಟಿವೆ. ಇದಕ್ಕೆ ವಿಷ ಮಿಶ್ರಿತ ಕಲುಷಿತ ನೀರು ಕಾರಣ ಎಂದು ಮಾಲೀಕ ಆರೋಪಿಸಿದ್ದಾರೆ. ಇನ್ನೂ ಹಲವಾರು ಕುರಿಗಳು ಅಸ್ವಸ್ಥಗೊಂಡಿವೆ.
ಸಂಬಂಧಪಟ್ಟ ಅಧಿಕಾರಿಗಳು ಚರಂಡಿಗೆ ಯಾವ ಕಾರ್ಖಾನೆಯಿಂದ ವಿಷ ಮಿಶ್ರಿತ ನೀರು ಬರುತ್ತಿದೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.