119 ಐಪಿಎಸ್​ಗಳು ಫೇಲ್!

ಹೈದರಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್​ವಿಪಿಎನ್​ಪಿಎ) ತರಬೇತಿ ಪಡೆದ 122 ಐಪಿಎಸ್ ಅಧಿಕಾರಿಗಳ ಪೈಕಿ 119 ಮಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2016ರಲ್ಲಿ ನೇಮಕಗೊಂಡಿದ್ದ ಈ ಅಧಿಕಾರಿಗಳು, ಎಸ್​ವಿಪಿಎನ್​ಪಿಎನಲ್ಲಿ ತರಬೇತಿ ಪಡೆಯುತ್ತಿದ್ದರು. ಬ್ಯಾಚ್​ನಲ್ಲಿ ತರಬೇತಿ ಪಡೆಯುತ್ತಿದ್ದ ಭೂತಾನ್, ನೇಪಾಳ ಮತ್ತು ಮಾಲ್ಡೀವ್ಸ್​ನ 14 ಪೊಲೀಸ್ ಅಧಿಕಾರಿಗಳೂ ಅನುತ್ತೀರ್ಣರಾಗಿದ್ದಾರೆ. ಈ ಬ್ಯಾಚ್​ನ ನಿರ್ಗಮನ ಪಥಸಂಚಲನ ಕಳೆದ ಅಕ್ಟೋಬರ್​ನಲ್ಲಿ ನಡೆದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದ ಮೆಡಲ್ ಮತ್ತು ಟ್ರೋಫಿಗಳನ್ನು ಪಡೆದ ಬಹುತೇಕರು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಅಕಾಡೆಮಿ ಇತಿಹಾಸದಲ್ಲಿ ಇಂತಹ ಫಲಿತಾಂಶ ಬಂದಿರಲಿಲ್ಲ. ಎರಡನೇ ಹಂತದ ಪರೀಕ್ಷೆಯಲ್ಲಿ ವಿಫಲರಾದ 119 ಮಂದಿ ಮತ್ತೆ ಪರೀಕ್ಷೆ ಎದುರಿಸಬೇಕು ಎಂದು ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.