ತರಬೇತಿ ಪರೀಕ್ಷೆಯಲ್ಲಿ 119 ಐಪಿಎಸ್​ ಅಧಿಕಾರಿಗಳು ಫೇಲ್​

ಹೈದರಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‌ವಿಪಿಎನ್‌ಪಿಎ) ತರಬೇತಿ ಪಡೆದ 2016ನೇ ಬ್ಯಾಚ್​ನ 122 ಐಪಿಎಸ್ ಅಧಿಕಾರಿಗಳಲ್ಲಿ 119 ಮಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ಈ ಅಧಿಕಾರಿಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಆದರೂ ಅವರು ಪ್ರಸ್ತುತ ಪ್ರೊಬೇಷನರಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಪಾಸ್​ ಆಗಲು ಮೂರು ಅವಕಾಶ ನೀಡಲಾಗಿದೆ. ಮೂರೂ ಅವಕಾಶಗಳಲ್ಲಿ ಐಪಿಎಸ್​ ಅಧಿಕಾರಿಗಳು ಆ ವಿಷಯದಲ್ಲಿ ತೇರ್ಗಡೆಯಾಗದಿದ್ದರೆ ಅವರು ಐಪಿಎಸ್​ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ.

2017ರ ಅಕ್ಟೋಬರ್​ನಲ್ಲಿ ನಡೆದ ಪಾಸಿಂಗ್​ ಔಟ್​ ಪರೇಡ್​ನಲ್ಲಿ ಈ ಬ್ಯಾಚ್​ನ ಹಲವು ಅಧಿಕಾರಿಗಳು ಗೃಹ ಸಚಿವರಿಂದ ಪದಕಗಳನ್ನೂ ಸಹ ಪಡೆದಿದ್ದರು. ಅವರೂ ಸಹ ಪರೀಕ್ಷೆಯಲ್ಲಿ ಪಾಸ್​ ಆಗಿಲ್ಲ.

ತರಬೇತಿ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ವಿಫಲರಾಗುವುದು ಸಾಮಾನ್ಯ. ಆದರೆ 2016ರ ಬ್ಯಾಚ್​ ಪರೀಕ್ಷೆಯಲ್ಲಿ ಶೇ. 90 ರಷ್ಟು ಮಂದು ಅನುತ್ತೀರ್ಣರಾಗಿದ್ದು ಮಾತ್ರ ಆಶ್ಚರ್ಯಕರ ಸಂಗತಿ. ಅಕಾಡೆಮಿಯ ಇತಿಹಾಸದಲ್ಲಿ ಇಂತಹ ಫಲಿತಾಂಶ ಬಂದಿರಲಿಲ್ಲ. ಎರಡನೇ ಹಂತದ ಪರೀಕ್ಷೆಯಲ್ಲಿ ವಿಫಲರಾದ 119 ಅಧಿಕಾರಿಗಳು ಮತ್ತೆ ಪರೀಕ್ಷೆ ಎದುರಿಸಬೇಕು ಎಂದು ಅಕಾಡೆಮಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)