110 ಹಳ್ಳಿಗಳಿಗೆ ಟ್ಯಾಂಕರ್ ಮೂಲಕವೇ ನೀರು

ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಈ ಬಾರಿ ಬೇಸಿಗೆಯಲ್ಲೂ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್​ಗಿರಿನಾಥ್ ತಿಳಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ರ್ಚಚಿಸಲು ಮಂಗಳವಾರ ಕರೆಯಲಾಗಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಮೇ ತಿಂಗಳಲ್ಲಿ ಪೈಪ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಆದರೆ, ನೀರು ಪೂರೈಕೆ ಪರೀಕ್ಷೆಯನ್ನು 1 ವರ್ಷ ನಡೆಸಬೇಕಿದೆ. ಹೀಗಾಗಿ ಬೇಸಿಗೆಯಲ್ಲೂ ಮನೆಗಳಿಗೆ ಈಗ ಚಾಲ್ತಿಯಲ್ಲಿರುವಂತೆ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತದೆ ಎಂದರು.

ಬೇಸಿಗೆ ಅವಧಿಯಲ್ಲಿ ತೀರಾ ಸಮಸ್ಯೆ ಉಂಟಾದರೆ 20ರಿಂದ 30 ಹಳ್ಳಿಗೆ ನೀರು ಕೊಡಬಹುದು. 2020ರ ವೇಳೆಗೆ 110 ಹಳ್ಳಿಗಳಿಗೆ ನಿರಂತರವಾಗಿ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಜಲಾಗಾರ ನಿರ್ವಣಕ್ಕೆ ಜಾಗವಿಲ್ಲ: ನೀರು ಪೂರೈಕೆಗೆ ಜಲಾಗಾರಗಳನ್ನು ನಿರ್ವಿುಸಬೇಕಿದೆ. ಇವುಗಳಲ್ಲಿ ನೀರು ಶೇಖರಿಸಿ ಅಲ್ಲಿಂದ ಮನೆಗಳಿಗೆ ಪೂರೈಸಲಾಗುವುದು. ಜಲಾಗಾರ ನಿರ್ವಣಕ್ಕೆ ಗೊಟ್ಟಿಗೆರೆ, ಬ್ಯಾಟರಾಯನಪುರದಲ್ಲಿ ಸೂಕ್ತ ಜಾಗ ಹುಡುಕಲಾಗುತ್ತಿದೆ ಎಂದು ತಿಳಿಸಿದರು.

ಶುಲ್ಕ ಪಾವತಿಯಲ್ಲೂ ಹಿನ್ನಡೆ: 110 ಹಳ್ಳಿಗಳ ವ್ಯಾಪ್ತಿಯಲ್ಲಿ 5 ಸಾವಿರ ಮಂದಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 1 ಸಾವಿರ ಮಂದಿ ಶುಲ್ಕ ಪಾವತಿಸಿದ್ದಾರೆ. ಶುಲ್ಕ ಪಾವತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

6040 ನಿವೇಶನದ ಕಟ್ಟಡಕ್ಕೆ ಒಸಿ ವಿನಾಯಿತಿ: ನೀರಿನ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ (ಒಸಿ) ನೀಡುವುದು ಕಡ್ಡಾಯ ಮಾಡಿರುವ ಜಲಮಂಡಳಿ ನಿರ್ಧಾರದ ವಿರುದ್ಧ ಬಿಬಿಎಂಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್​ಗಿರಿನಾಥ್, 6040 ನಿವೇಶನದಲ್ಲಿ ನಿರ್ವಿುಸಿದ ಕಟ್ಟಡಗಳಿಗೆ ಒಸಿ ನೀಡುವುದಕ್ಕೆ ವಿನಾಯಿತಿ ನೀಡಿ ಬಿಬಿಎಂಪಿ ನಿರ್ಣಯ ಅನುಮೋದಿಸಿದರೆ ಪಾಲಿಸಲಾಗುವುದು. ಉಳಿದಂತೆ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೆ ಸಂಪರ್ಕ ಪಡೆದು ಒಸಿ ನೀಡದಿದ್ದರೆ ಪ್ರತಿ ತಿಂಗಳ ನೀರಿನ ಬಿಲ್​ನಲ್ಲಿ ಶೇ.50 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.

ಪ್ರತಿ ವ್ಯಕ್ತಿಗೆ 130 ಲೀ. ನೀರು ನೀಡಿಕೆ ಗುರಿ: ಸದ್ಯ ನಗರಕ್ಕೆ ಪ್ರತಿದಿನ 1,400 ದಶಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೆ ದಿನಕ್ಕೆ 100 ಲೀ. ಶುದ್ಧ ನೀರು, 25 ರಿಂದ 30 ಲೀ. ಸಂಸ್ಕರಿತ ನೀರು ಸೇರಿ ಒಟ್ಟು 130 ರಿಂದ 135 ಲೀಟರ್ ನೀಡುವುದು ನಮ್ಮ ಗುರಿಯಾಗಿದೆ. ನಗರದಲ್ಲಿ ಶೇಕಡ 37.5 ನೀರಿನ ಸೋರಿಕೆಯಿದ್ದು, ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಹಳೆಯ ಪೈಪ್​ಗಳನ್ನು ಬದಲಾವಣೆ ಮತ್ತು ದುರಸ್ತಿ ಮಾಡಲಾಗುತ್ತಿದೆ. ನಗರದಲ್ಲಿನ ಎಲ್ಲ ಹಳೆಯ ಪೈಪ್​ಗಳನ್ನು ಬದಲಿಸಲು 360 ಕೋಟಿ ರೂ. ಬೇಕಿದೆ. ಪ್ರತಿವರ್ಷ 100 ಕೋಟಿ ರೂ. ವ್ಯಯಿಸಿ ಹಂತಹಂತವಾಗಿ ಜಲಮಂಡಳಿ ಕಾಮಗಾರಿ ನಡೆಸಲಿದೆ ಎಂದು ತಿಳಿಸಿದರು.

1,575 ಎಂಎಲ್​ಡಿ ತ್ಯಾಜ್ಯ ನೀರು ಸಂಸ್ಕರಣೆ ಗುರಿ: ಕಾವೇರಿಯಿಂದ ಪ್ರತಿದಿನ 1,400 ದಶಲಕ್ಷ ಲೀಟರ್ ನೀರು ತರಲಾಗುತ್ತಿದೆ. ಅದರ ಜತೆಗೆ 400 ದಶಲಕ್ಷ ಲೀ. ನೀರನ್ನು ಕೊಳವೆ ಬಾವಿ ಮೂಲಕ ಪೂರೈಸಲಾಗುತ್ತಿದೆ. 2017ರವರೆಗೆ 721 ದಶಲಕ್ಷ ಲೀ. (ಶೇ.50) ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯ ಹೊಂದಲಾಗಿತ್ತು. 2018ರಲ್ಲಿ 336 ದಶಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಣೆ ಮಾಡುವ 10 ಘಟಕ ಸ್ಥಾಪನೆ (ಎಸ್​ಟಿಪಿ) ಮಾಡುವುದಕ್ಕೆ ಜೈಕಾ ವತಿಯಿಂದ ಅನುದಾನ ಪಡೆದು ಯೋಜನೆ ಆರಂಭಿಸಲಾಗಿದೆ. ಅದರ ಜತೆಗೆ 440 ದಶಲಕ್ಷ ಲೀ. ಸಾಮರ್ಥ್ಯದ ಹೆಬ್ಬಾಳ, ಕೆಎನ್​ಸಿ ವ್ಯಾಲಿ ಸೇರಿ ನಾಲ್ಕು ಕಡೆ ಎಸ್​ಟಿಪಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಅಮೃತ್ ಯೋಜನೆ ಅಡಿಯಲ್ಲಿ 75 ದಶಲಕ್ಷ ಲೀ. ಎಸ್​ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆ 2020ರ ವೇಳೆಗೆ 1,575 ದಶಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಣೆ ಮಾಡಿ 75 ದಶಲಕ್ಷ ಲೀ. ನೀರನ್ನು 110 ಹಳ್ಳಿಗಳಿಗೆ ಪೂರೈಸಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಸದಸ್ಯರಿಗೆ ಮಾಹಿತಿ ನೀಡಿದರು.

ಮ್ಯಾನ್​ಹೋಲ್​ಗಳಿಗೆ ಜಿಪಿಎಸ್ ನಗರದಲ್ಲಿರುವ 2.4 ಲಕ್ಷ ಶೌಚಗುಂಡಿಗಳಿಗೆ ಗುರುತು ಸಂಖ್ಯೆ ನೀಡಿ ಜಿಪಿಎಸ್ ಅಳವಡಿಕೆ ಮಾಡ ಲಾಗಿದೆ. ಮ್ಯಾನ್​ಹೋಲ್ ಸ್ವಚ್ಛಗೊಳಿಸುವ ಜೆಟ್ಟಿಂಗ್ ಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಜಿಪಿಎಸ್ ಅಳವಡಿಸಲಾಗಿದೆ. ಜಲ

ಮಂಡಳಿಯಲ್ಲಿ ಪ್ರಸ್ತುತ 110 ಜೆಟ್ಟಿಂಗ್ ಯಂತ್ರಗಳಿದ್ದು, 36 ಹೊಸ ಯಂತ್ರ ಖರೀದಿ ಮಾಡಲಾಗುತ್ತಿದೆ. ಕಳೆದ ವರ್ಷ ಪಾಲಿಕೆಯಿಂದ 110 ಹಳ್ಳಿಗಳಿಗೆ 30 ಜೆಟ್ಟಿಂಗ್ ಯಂತ್ರ ಕೊಡುವುದಾಗಿ ಹೇಳಲಾಗಿತ್ತು. ಎಲ್ಲ ಸೇರಿ 176 ಯಂತ್ರಗಳಾಗಲಿವೆ. ಒಳಚರಂಡಿ ಹೂಳು ತೆಗೆಯಲು ಹೊರ ಗುತ್ತಿಗೆಯಲ್ಲಿ 4 ಬೃಹತ್ ಯಂತ್ರಗಳನ್ನು ಪಡೆಯಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

914 ಮಳೆ ನೀರು ಮೋರಿಗೆ ತ್ಯಾಜ್ಯ ನೀರು

ಕೆರೆ ಬಳಿ ಎಸ್​ಟಿಪಿ ನಿರ್ಮಾಣ ಮಾಡಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷ ಆ ಕಾರ್ಯ ಆರಂಭವಾಗಲಿದೆ. 914 ಪ್ರದೇಶದಲ್ಲಿ ಕೊಳಚೆ ನೀರನ್ನು ರಾಜಕಾಲುವೆಗೆ ಹರಿಸಲಾಗುತ್ತಿದೆ ಎಂದು ಗುರುತಿಸಲಾಗಿದೆ. ಅದನ್ನು ಸರಿಪಡಿಸುವುದಕ್ಕೆ 76 ಕೋಟಿ ರೂ. ಬೇಕಾಗಲಿದೆ. ಟೆಂಡರ್ ಆಹ್ವಾನಿಸಲಾಗಿದ್ದು, 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ

ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆ ವಿಚಾರವಾಗಿ ಬಿಬಿಎಂಪಿ ಸದಸ್ಯರು ನೀಡುವ ದೂರನ್ನು ಜಲಮಂಡಳಿ ಪರಿಗಣಿಸಬೇಕು. ಇಲ್ಲದಿದ್ದರೆ ಎಲ್ಲ 198 ಸದಸ್ಯರು ಜಲಮಂಡಳಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಎಚ್ಚರಿಕೆ ನೀಡಿದರು.

ಶಾಲೆ, ಸ್ಮಶಾನ, ಆಸ್ಪತ್ರೆಗೆ ರಿಯಾಯಿತಿ ಕೊಡಿ

ಸರ್ಕಾರಿ ಮತ್ತು ಬಿಬಿಎಂಪಿ ಶಾಲೆ, ಸ್ಮಶಾನ ಹಾಗೂ ಆಸ್ಪತ್ರೆಗಳಿಗೆ ವಾಣಿಜ್ಯ ಶುಲ್ಕ ವಿಧಿಸಲಾಗುತ್ತಿದೆ. ಅದಕ್ಕೆ ವಿನಾಯಿತಿ ನೀಡಬೇಕೆಂದು ಸದಸ್ಯರು ಕೋರಿದರು. ಸ್ಮಶಾನಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುತ್ತಿಲ್ಲ. ಆದರೆ, ಶಾಲೆ ಮತ್ತು ಆಸ್ಪತ್ರೆಗಳಿಗೆ ವಿನಾಯಿತಿ ನೀಡಿ ವಸತಿ ಶುಲ್ಕವನ್ನೇ ವಿಧಿಸಲಾಗುವುದು ಎಂದು ತುಷಾರ್ ಗಿರಿನಾಥ್ ಭರವಸೆ ನೀಡಿದರು.

ಸದಸ್ಯರ ಮಾನ ಹರಾಜು

ಜಯಮಹಲ್ ವಾರ್ಡ್ ಬೆನ್ಸನ್ ಟೌನ್​ಗೆ 10 ದಿನಗಳಾದರೂ ಕುಡಿಯುವ ನೀರು ಬರುವುದಿಲ್ಲ. ಅದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಈ ಕುರಿತಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬಿಬಿಎಂಪಿ ಸದಸ್ಯರ ಮಾನ ಹರಾಜು ಹಾಕುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಬಿಎಂಪಿ ಸದಸ್ಯರು ಹೊಣೆಯಾಗಬೇಕಾಗಿದೆ ಎಂದು ಕಾಂಗ್ರೆಸ್ ಸದಸ್ಯ ಎಂ.ಕೆ. ಗುಣಶೇಖರ್ ಆರೋಪಿಸಿದರು.

ರಾಜಕಾಲುವೆಗಳಲ್ಲಿ ಕೊಳಚೆ ನೀರು

ಮಳೆ ಬಾರದಿದ್ದರೆ ಕಾವೇರಿ, ಕೃಷ್ಣಾ ನದಿಗಳಲ್ಲೇ ಬೇಸಿಗೆಯಲ್ಲಿ ನೀರು ಹರಿಯುವುದಿಲ್ಲ. ಆದರೆ, ಜಲಮಂಡಳಿ ಕಾರ್ಯದಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಾಜಕಾಲುವೆಯಲ್ಲೂ ನಿರಂತರವಾಗಿ ಕೊಳಚೆ ನೀರು ಹರಿಯುವಂತಾಗಿದೆ. ರಾಜಕಾಲುವೆಗಳಿರುವುದು ಮಳೆ ನೀರು ಹರಿಯಲು. ಆದರೆ, ಸಾರ್ವಜನಿಕರು ಕೊಳಚೆ ನೀರನ್ನು ರಾಜಕಾಲುವೆಗೆ ಬಿಡುತ್ತಿದ್ದಾರೆ. ಅದನ್ನು ತಡೆಯದೆ ಜಲಮಂಡಳಿ ನಿರ್ಲಕ್ಷಿಸಿದೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.

ಜೆಟ್ಟಿಂಗ್ ಯಂತ್ರ ನೀಡಲು ಲಂಚ

ಮ್ಯಾನ್​ಹೋಲ್ ಸ್ವಚ್ಛ ಗೊಳಿಸಲು ಜಟ್ಟಿಂಗ್​ಯುಂತ್ರ ಕಳುಹಿಸುವಂತೆ ಸಾರ್ವಜನಿಕರು ಜಲ ಮಂಡಳಿ ಸಿಬ್ಬಂದಿ ಕೇಳಿ ದರೆ 3ರಿಂದ 5 ಸಾವಿರ ರೂ. ಲಂಚ ಕೇಳುತ್ತಾರೆ ಎಂದು ಬಿಜೆಪಿ ಸದಸ್ಯ ನರಸಿಂಹನಾಯಕ್ ಸಭೆಯಲ್ಲಿ ಆರೋಪಿಸಿದರು.