ಪಾಕ್​, ಚೀನಾ ಗಡಿಯಲ್ಲಿ ಯುದ್ಧ ವಿಮಾನಗಳಿಗಾಗಿ ಬಾಂಬ್​ ನಿರೋಧಕ ಕಾಂಕ್ರಿಟ್​ ಶೆಲ್ಟರ್​ ನಿರ್ಮಿಸಲು ಕೇಂದ್ರ ಅಸ್ತು

ನವದೆಹಲಿ: ಯುದ್ಧದ ಸಂದರ್ಭದಲ್ಲಿ ಶತ್ರುಪಡೆಯ ಬಾಂಬ್​ ಮತ್ತು ಮಿಸೈಲ್​ ದಾಳಿಯಿಂದ ಯುದ್ಧ ವಿಮಾನಗಳನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 110 ಕಾಂಕ್ರಿಟ್​ ಶೆಲ್ಟರ್​ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಪಾಕ್​ ಆಕ್ರಮಿತ ಕಾಶ್ಮೀರದ ಬಾಲಾಕೋಟ್​ನಲ್ಲಿ ಜೈಷ್​ ಉಗ್ರರ ಕ್ಯಾಂಪ್​ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದಿಂದ ಯುದ್ಧವಿಮಾನಗಳನ್ನು ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರ 5000 ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿರುವ ಏರ್​ಬೇಸ್​ಗಳಲ್ಲಿ 110 ಬಾಂಬ್​ ನಿರೋಧಕ ಕಾಂಕ್ರಿಟ್​ ಶೆಲ್ಟರ್​ ಅಥವಾ ಬ್ಲಾಸ್ಟ್​ ಪೆನ್​ಗಳನ್ನು ನಿರ್ಮಿಸಲು ಮುಂದಾಗಿದೆ.

ಈ ಶೆಲ್ಟರ್​ಗಳಲ್ಲಿ ಸುಖೋಯ್​ 30 ಎಂಕೆಐ ಸೇರಿದಂತೆ ವಾಯುಪಡೆಯ ಅತ್ಯಂತ ಪ್ರಮುಖ ವಿಮಾನಗಳನ್ನು ಗಡಿ ಭಾಗದಲ್ಲಿ ಇರಿಸಬಹುದಾಗಿದೆ. ಪ್ರಸ್ತುತ ಪ್ರಮುಖ ಯುದ್ಧ ವಿಮಾನಗಳನ್ನು ಗಡಿಯಿಂದ ದೂರದ ಪ್ರದೇಶದಲ್ಲಿ ಇರಿಸಲಾಗುತ್ತಿದೆ. ಆದರೆ ಈ ಶೆಲ್ಟರ್​ಗಳ ನಿರ್ಮಾಣದಿಂದ ಗಡಿಯಲ್ಲಿ ಪ್ರಮುಖ ವಿಮಾನಗಳನ್ನು ಇರಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
1965ರ ಯುದ್ಧದ ಸಂದರ್ಭದಲ್ಲಿ ಏರ್​ಬೇಸ್​ನಲ್ಲಿ ಹೊರಗೆ ನಿಲ್ಲಿಸಿದ್ದ ಹಲವು ವಿಮಾನಗಳು ಶತ್ರು ವಿಮಾನದ ಬಾಂಬ್​ ದಾಳಿಗೆ ನಾಶವಾಗಿದ್ದವು. ಆ ನಂತರ ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿರಿಸಲು ಕಾಂಕ್ರಿಟ್​ನ ಶೆಲ್ಟರ್​ಗಳನ್ನು ನಿರ್ಮಿಸಲಾಗಿದೆ. (ಏಜೆನ್ಸೀಸ್​)