ಮೌಂಟ್​ ಎವರೆಸ್ಟ್​ನಲ್ಲಿ ಸಂಗ್ರಹವಾಗಿದ್ದ 11 ಟನ್​ ಕಸ ವಾಪಸ್​ ತಂದ ನೇಪಾಳ ಸರ್ಕಾರ

ಕಾಠ್ಮಂಡು: ಜಗತ್ತಿನ ಅತ್ಯಂತ ಎತ್ತರದ ಶಿಖರ ಎಂದು ಖ್ಯಾತಿ ಗಳಿಸಿರುವ ಮೌಂಟ್​ ಎವರೆಸ್ಟ್​ ಏರಲು ಪ್ರತಿ ವರ್ಷ ನೂರಾರು ಪರ್ವತಾರೋಹಿಗಳು ಆಗಮಿಸುತ್ತಾರೆ. ಇವರ ಪರ್ವತಾರೋಹಣ ಮುಗಿಸಿ ವಾಪಸ್​ ತೆರಳುವ ವೇಳೆ ಪರ್ವತದಲ್ಲಿ ಟನ್​ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ ವರ್ಷ ನೇಪಾಳ ಸರ್ಕಾರ 11 ಟನ್​ ತ್ಯಾಜ್ಯ ಮತ್ತು ನಾಲ್ವರು ಪರ್ವತಾರೋಹಿಗಳ ಮೃತದೇಹವನ್ನು ಪರ್ವತದಿಂದ ಕೆಳಗೆ ಹೊತ್ತು ತಂದಿದೆ.

ಶಿಖರ ಏರಲು ಬರುವ ಪರ್ವತಾರೋಹಿಗಳು ಹಿಂದಿರುಗುವಾಗ ಉಪಯೋಗಿಸಿದ ಆಮ್ಲಜನಕ ಬಾಟಲ್​ಗಳು, ಹರಿದ ಟೆಂಟ್​ಗಳು, ಹಗ್ಗ, ಮುರಿದ ಏಣಿಗಳು, ಕ್ಯಾನ್​ಗಳು ಮತ್ತು ಪ್ಲಾಸ್ಟಿಕ್​ ಕವರ್​ಗಳನ್ನು ಬಿಟ್ಟು ಬರುತ್ತಾರೆ. 20 ಶೆರ್ಪಾಗಳ ತಂಡ ಏಪ್ರಿಲ್​ ಮತ್ತು ಮೇ ತಿಂಗಳಿನಲ್ಲಿ ಹೀಗೆ ಶಿಖರದ ವಿವಿಧ ಕ್ಯಾಂಪ್​ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಂಗ್ರಹಿಸಿ ತಂದಿದೆ.

ಬೇಸ್​ ಕ್ಯಾಂಪ್​ಗಿಂತ ಎತ್ತರದ ಕ್ಯಾಂಪ್​ಗಳಿಂದ 5 ಟನ್​ ತ್ಯಾಜ್ಯ ಸಂಗ್ರಹಿಸಿದ್ದರೆ, ಬೇಸ್​ ಕ್ಯಾಂಪ್​ನಿಂದ 6 ಟನ್​ ತ್ಯಾಜ್ಯ ಸಂಗ್ರಹಿಸಲಾಗಿದೆ. ತ್ಯಾಜ್ಯವನ್ನು ಕಾಠ್ಮಂಡುವಿಗೆ ತಂದು ತ್ಯಾಜ್ಯ ಮರುಬಳಕೆ ಘಟಕಗಳಿಗೆ ನೀಡಲಾಗಿದೆ. ಪರ್ವತದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ತ್ಯಾಜ್ಯ ಇದ್ದು, ಅದು ಹಿಮದಲ್ಲಿ ಮುಚ್ಚಿದೆ. ಬೇಸಿಗೆಯಲ್ಲಿ ಹಿಮ ಕರಗಿದಾಗ ಈ ತ್ಯಾಜ್ಯವನ್ನು ಸಂಗ್ರಹಿಸಬಹುದು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಡಿಜಿ ದಂಡು ರಾಜ್​ ಘಿಮಿರೆ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *