ಅಕ್ರಮ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: 11 ಜನರು ಸಾವು

ಭಾದೊಹಿ: ಅಕ್ರಮವಾಗಿ ಪಟಾಕಿ ತಯಾರಿಕೆಗೆಂದು ಬಳಸಲಾಗುತ್ತಿದ್ದ ಕಾರ್ಪೆಟ್‌ ತಯಾರಿಕಾ ಕಾರ್ಖಾನೆಯ ಕಟ್ಟಡದ ಮುಂಭಾಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 11 ಜನರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ.

ಕಟ್ಟಡದೊಳಗೆ ಪಟಾಕಿ ಶೇಖರಿಸಿಟ್ಟಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಸಂಪೂರ್ಣ ಕಟ್ಟಡ ಕುಸಿದಿದ್ದು, ಪಕ್ಕದ ಮೂರು ಮನೆಗಳು ಉರುಳಿವೆ.

ಇನ್ನು ಘಟನೆ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದು, ಸ್ಫೋಟದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ. ಮಾಲ್ದಾದ 9 ಜನರು ಘಟನೆಯಲ್ಲಿ ಮೃತಪಟ್ಟಿದ್ದು, ಬಂಗಾಳದ ಸಚಿವ ಶುವೇಂದು ಮತ್ತು ಫಿರ್ಹಾದ್‌ ಅವರು ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಫೋಟ ಸಂಭವಿಸಿದ ವೇಳೆ ಕಾರ್ಖಾನೆಯೊಳಗೆ ಕೆಲವೇ ಕೆಲವು ಮಂದಿ ಇದ್ದರು. ಇಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕೆಯೂ ನಡೆಯುತ್ತಿತ್ತು. ಹೆಚ್ಚಿನ ಜನರು ಒಳಗಡೆ ಸಿಲುಕಿರುವ ಸಾಧ್ಯತೆ ಇಲ್ಲ ಎಂದು ವಾರಾಣಸಿ ಐಜಿ ಪಿಯೂಷ್‌ ಶ್ರೀವಾಸ್ತವ ತಿಳಿಸಿದ್ದಾರೆ. (ಏಜೆನ್ಸೀಸ್)