ವಿಜಯವಾಣಿ ಸುದ್ದಿಜಾಲ ಅಥಣಿ ಗ್ರಾಮೀಣ
ಕಷ್ಟಗಳನ್ನು ತೊರೆದು ಭಕ್ತಿಯಲ್ಲಿ ಲೀನರಾದಾಗ ಮಾತ್ರ ಆತ್ಮಶುದ್ಧಿ ಸಾಧ್ಯ ಎಂದು ಪಪೂ ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಪಂಚಕಲ್ಯಾಣ ಮಹೋತ್ಸವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿರ್ವಾಣಕಲ್ಯಾಣ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದಿನ ಯುವಜನರಲ್ಲಿ ಆಧ್ಯಾತ್ಮಿಕ, ಸಂಸ್ಕೃತಿ ಬಗ್ಗೆ ಅರಿವು ಮೂಡಿದಲ್ಲಿ ಆಧ್ಯಾತ್ಮಿಕತೆ ಉಳಿಯಲು ಸಾಧ್ಯ. ಈ ಪಂಚಕಲ್ಯಾಣ ಮಹಾಮಹೋತ್ಸವದಲ್ಲಿ ಗರ್ಭ ಕಲ್ಯಾಣದಿಂದ ಮೋಕ್ಷ ಕಲ್ಯಾಣದವರೆಗೆ ಕಾರ್ಯಗಳು ನಡೆದಿವೆ. ಸಂಸಾರದಲ್ಲಿಲ್ಲದ ಸುಖ ಮುಕ್ತಿಯಲ್ಲಿದೆ. ಹೆಣ್ಣುಮಕ್ಕಳು ಭಗವಾನ್ ಪಾರ್ಶ್ವನಾಥರ, ತೀರ್ಥಂಕರರ, ಮುನಿಮಹಾರಾಜರ ಸ್ಮರಣೆಯೊಂದಿಗೆ ಸಜ್ಜನರಾಗಿ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮ ಫಲಪ್ರದ ವಾಗುವದು ಎಂದರು.
ಸಾಧನಾರತ್ನ ಆಚಾರ್ಯ ಪಪೂ ಶ್ರೀ 108 ಅಮಿತಸೇನ ಮುನಿಮಹಾರಾಜರು ಮಾತನಾಡಿ, ಇಡೀ ಗ್ರಾಮವೆ ಒಕ್ಕೊರಲಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ. ಮಹೋತ್ಸವ ಯಶಸ್ಸಿಗೆ ಅನುಪಮ ಸೇವೆ ಸಲ್ಲಿಸಿದ ಭಕ್ತರ ಸೇವೆಗೆ ತೀರ್ಥಂಕರರು ಐಶ್ವರ್ಯ, ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು.
ಸಂಭ್ರಮದ ಮೆರವಣಿಗೆ
ಯಜಮಾನರು ಸೌಧರ್ಮ ಇಂದ್ರ ಇಂದ್ರಾಣಿ, ಕುಬೇರ ದಂಪತಿ, ತೀರ್ಥಂಕರರ ತಂದೆ, ತಾಯಿ, ಈಶಾನ್ಯ, ಸಾನತ್ಕುಮಾರ, ಮಹೇಂದ್ರ ಇಂದ್ರ ಇಂದ್ರಾಣಿಯರು, ಚಕ್ರವರ್ತಿ ಹಾಗೂ ಸುವರ್ಣ ಸೌಭಾಗ್ಯವತಿ ದಂಪತಿ, ಆನೆ, ಕುದುರೆ, ಭವ್ಯ ರಥೋತ್ಸವ, ಬೆಂಡಬಾಜಿ, ಚಂಡಿವಾದ್ಯ, ಜಾಂಜ್‌ಪತಾಕ್ ಸೇರಿ ಹಲವು ಕಲಾವಿಧರೊಂದಿಗೆ ಗ್ರಾಮದ ಎಲ್ಲ ಬಡಾವಣೆಗಳಲ್ಲಿ ಸಂಭ್ರಮದ ಮೆರವಣಿಗೆ ಜರುಗಿತು.
ಸೇವೆ ಸಲ್ಲಿಸಿದ ಮಹನೀಯರನ್ನು ಸತ್ಕರಿಸಿ, ಗೌರವಿಸಲಾಯಿತು. ಪಪೂ ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮುನಿಮಹಾರಾಜರು, ಪಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು, ಪಪೂ 105 ಅನಂತಸೇನ ಮಹಾರಾಜರು, ಪಪೂ ಶ್ರೀ 105 ಅಕ್ಷಯಸೇನ ಮಹಾರಾಜರು, ಭರತೇಶ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ಪ್ರದೀಪ ಉಪಾಧ್ಯೆ, ಆರ್‌ಎಸ್‌ಎಸ್ ಪ್ರಮುಖ ಅರವಿಂದರಾವ ದೇಶಪಾಂಡೆ, ಉದ್ಯಮಿ ಶಿವಕುಮಾರ ಸವದಿ, ಸಂದೀಪ ಬೆಳಗಲಿ, ಎ.ಸಿ.ಪಾಟೀಲ, ಜಿಪಂ ಮಾಜಿ ಸದಸ್ಯೆ ಡಾ, ಸವಿತಾ ಪೂಜಾರಿ, ಅಧಿಕಾರಿಗಳಾದ ಜಿ.ವಿ. ಸಂಪನ್ನವರ, ಪ್ರವೀಣ ಹುಣಸಿಕಟ್ಟಿ, ಶಿವಶರಣ ಕರಡಿ, ಪಂಚಕಲ್ಯಾಣ ಮಹೋತ್ಸವ ಸಮಿತಿ ಸದಸ್ಯರು ಇದ್ದರು.