ವೆಬ್‌ಕಾಸ್ಟಿಂಗ್ ಉಡುಪಿ ಶೇ.100 ಸಾಧನೆ

ಉಡುಪಿ: ರಾಜ್ಯದಲ್ಲಿ ಏ.18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ 54 ಮತಗಟ್ಟೆಗಳ ಕ್ಯಾಮರಾ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸುವ ಮೂಲಕ ಉಡುಪಿ ಜಿಲ್ಲೆ ಶೇ.100 ಸಾಧನೆ ಮಾಡಿದೆ.

ಜಿಲ್ಲೆಯ 54 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪರಿಶೀಲಿಸಲು, ಈ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಕೂಡಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೆಬ್ ಕ್ಯಾಮರಾಗಳನ್ನು ಅಳವಡಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿದ್ದ ನಿಯಂತ್ರಣ ಕೊಠಡಿಯಲ್ಲಿ ಈ ಎಲ್ಲ ಮತಗಟ್ಟೆಗಳ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅಳವಡಿಸಿದ್ದ 110 ವೆಬ್ ಕ್ಯಾಮರಾಗಳಲ್ಲಿ 104 ಕ್ಯಾಮರಾಗಳು ಕಾರ್ಯ ನಿರ್ವಹಿಸಿವೆ. ಮೈಸೂರಿನ 179ರಲ್ಲಿ 163, ಚಿತ್ರದುರ್ಗದ 80ರಲ್ಲಿ 66, ತುಮಕೂರಿನ 140ರಲ್ಲಿ 131, ಮಂಡ್ಯದ 101ರಲ್ಲಿ 89, ಬೆಂಗಳೂರು ಸೆಂಟ್ರಲ್‌ನ 87ರಲ್ಲಿ 69, ಬೆಂಗಳೂರು ಉತ್ತರದ 101ರಲ್ಲಿ 95, ಕೋಲಾರದ 100ರಲ್ಲಿ 86, ರಾಮನಗರದ 60ರಲ್ಲಿ 59, ಬೆಂಗಳೂರು ದಕ್ಷಿಣದ 100ರಲ್ಲಿ 91, ಬೆಂಗಳೂರು ನಗರದ 100ರಲ್ಲಿ 95, ಹಾಸನದ 134ರಲ್ಲಿ 129, ಚಿಕ್ಕಬಳ್ಳಾಪುರದ 70ರಲ್ಲಿ 69 ಕಾರ್ಯ ನಿರ್ವಹಿಸಿವೆ.
ಏ.23ರಂದು ನಡೆಯುವ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ 16 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

 ವ್ಯವಸ್ಥಿತ ಪೂರ್ವತಯಾರಿ: ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಏ.7ರಿಂದಲೇ ವೆಬ್ ಕ್ಯಾಮರಾ ಅಳವಡಿಸಲು ಗುರುತಿಸಲಾಗಿದ್ದ 54 ಮತಗಟ್ಟೆಗಳಿಗೆ ಭೇಟಿ ನೀಡಿ, ವಿದ್ಯುತ್ ವ್ಯವಸ್ಥೆ, ಸಿಗ್ನಲ್ ದೊರೆಯುವ ಸ್ಥಳ ಗುರುತಿಸಿದ್ದರು. ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯವಿದ್ದ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದ್ದರು. ಹೀಗೆ ಎಲ್ಲ ಮತಗಟ್ಟೆಗಳನ್ನು ವ್ಯವಸ್ಥಿತಗೊಳಿಸಲಾಗಿತ್ತು ಎನ್ನುತ್ತಾರೆ ಜಿಲ್ಲಾ ವೆಬ್ ಕಾಸ್ಟಿಂಗ್ ನೋಡೆಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ್.