ಬೆಂಗಳೂರು: ಆಸ್ತಿ ತೆರಿಗೆಯನ್ನು ದೀರ್ಘ ಕಾಲದವರೆಗೆ ಪಾವತಿಸದ ಸುಸ್ತಿದಾರರಿಗಷ್ಟೇ ಬಾಕಿ ಮೊತ್ತದ ಮೇಲೆ ಶೇ.100 ದಂಡ ವಿಧಿಸಲಾಗುವುದೇ ಹೊರತು, ಗಡುವು ಮೀರಿದ ಮೊದಲ ದಿನವೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಎರಡು ವರ್ಷದವರೆಗೆ ಬಾಕಿ ಪಾವತಿಸದಿರುವವರಿಗೆ ಹಲವು ಬಾರಿ ನೋಟಿಸ್, ಎಸ್‌ಎಂಎಸ್ ಸಂದೇಶ ರವಾನೆ ಹಾಗೂ ಜಾಹೀರಾತು ಮೂಲಕ ತಿಳಿವಳಿಕೆ ನೀಡಲಾಗಿದೆ. ಆದರೂ, ಆಸ್ತಿ ತೆರಿಗೆಯನ್ನು ಇನ್ನೂ ಪಾವತಿಸದವರಿಗೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ 2024-25 ಆಸ್ತಿ ತೆರಿಗೆ ಪಾವತಿಸದಿದ್ದರೆ 2025ರ ಏ.1ರಿಂದ ಶೇ.100 ದಂಡವು ಅನ್ವಯಿಸದು. ಆದರೆ, 2 ವರ್ಷದ ಬಳಿಕವೂ ತೆರಿಗೆ ಕಟ್ಟದಿದ್ದರೆ 2026ರ ಏ.1ರಿಂದ ದಂಡ ಅನ್ವಯವಾಗುತ್ತದೆ. ಜತೆಗೆ 2025-26ರ ಪೂರ್ಣ ಅವಧಿಯಲ್ಲಿ ಸುಸ್ತಿದಾರರಿಗೆ ಶೇ.15 ಸರಳ ಬಡ್ಡಿ ಮಾತ್ರ ವಿಧಿಸಲಾಗುವುದೇ ಹೊರತು ಶೇ.100 ದಂಡ ಅಲ್ಲ ಎಂದು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
2.5 ಲಕ್ಷ ಸುಸ್ತಿದಾರರು:
ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷ ಸ್ವತ್ತುದಾರರು ತೆರಿಗೆ ಪಟ್ಟಿಯಲ್ಲಿದ್ದಾರೆ. ಈ ಪೈಕಿ ಈವ್‌ಎಗೆ ಅಂದಾಜು 2.5 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿಲ್ಲ. ತೆರಿಗೆ ಪಟ್ಟಿಯಲ್ಲಿರುವವರ ಪೈಕಿ ಒಂದು ವರ್ಷವೂ 17-18 ಲಕ್ಷ ಆಸ್ತಿಗಳ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈವರೆಗೂ ಪಾವತಿಸದ ದೀರ್ಘಕಾಲದ ತೆರಿಗೆ ಸುಸ್ತಿದಾರರಿಮಧ ತೆರಿಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇಂತಹವರನ್ನು ಹಾಗೆಯೇ ಬಿಟ್ಟಲ್ಲಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.