ಬೆಂಗಳೂರು: ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ನಲ್ಲಿ ಪ್ರತಿಪಾದಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ. ಮೊದಲ ವರ್ಗದಲ್ಲಿ 14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 13 ಲಕ್ಷ ರೂ., 7 ಕೋಟಿ ಕುಟುಂಬಗಳ ತಲಾ ಆದಾಯ 2.62 ಲಕ್ಷ ರೂ. ಆಗಿದ್ದರೆ, 100 ಕೋಟಿ ಜನರ ತಲಾ ಆದಾಯ 87 ಸಾವಿರ ರೂ., ಅಂದರೆ ತಿಂಗಳಿಗೆ ಸುಮಾರು 7 ಸಾವಿರ ರೂಪಾಯಿ ಆಗುತ್ತದೆ ಎಂದು ವಿವರಿಸಿದ ಸಿದ್ದರಾಮಯ್ಯ ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ. ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿ ಯೋಜನೆಗಳಾಗಿವೆ ಎಂದರು.
ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರಿಲ್ಲ: ರಾಜ್ಯದಲ್ಲಿ ಇವತ್ತಿನವರೆಗೂ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರ ಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರುಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡುತ್ತೇವೆ ಎಂದು ಶಪಥ ಮಾಡಿದರು.
ಬಿಜೆಪಿ ಬಳವಳಿ: ಪೆಂಡಿಂಗ್ ಬಿಲ್ಸ್ ಎಲ್ಲವೂ ಬಿಜೆಪಿ ಬಳವಳಿಯಾಗಿದೆ. ಗುತ್ತಿಗೆದಾರರಿಗೆ 32 ಸಾವಿರ ಕೋಟಿ ಹಣ ಕೊಡಬೇಕಾಗಿದೆ. ಗುತ್ತಿಗೆದಾರ ಸಂಘದವರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಒಂದೇ ಬಾರಿ ಕೊಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಲೀಟರ್ ಹಾಲಿಗೆ 7 ರೂ ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿದ್ದು ನಿಜ. ಮುಂದಿನ ವರ್ಷ ಪ್ರತಿ ಲೀಟರ್ಗೆ 7 ರೂ ಪ್ರೋತ್ಸಾಹಧನ ಕೊಡಲಾಗುವುದು ಎಂದು ಸಿಎಂ ಹೇಳಿದರು.
ಬಿಜೆಪಿಯಿಂದ ಗ್ಯಾರಂಟಿ ಕಾಪಿ
ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದರು ಎಂದು ಸಿಎಂ ಅಣಕವಾಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಪ್ರತಿಪಕ್ಷಗಳು ಒಪ್ಪಿಕೊಳ್ಳಲಿ. ಬಿಜೆಪಿಯವರು ಸುಳ್ಳು ಭಾಷಣ ಮಾಡುವುದರಲ್ಲಿ ನಿಸ್ಸೀಮರು ಎಂದು ಎಲ್ಲರಿಗೂ ತಿಳಿದಿದೆ. ಮೋದಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದ ಬಿಜೆಪಿಗರು ನಮ್ಮ ಯೋಜನೆಗಳನ್ನು ಕಾಪಿ ಮಾಡಿದ್ದಾರೆ ಎಂದು ಒತ್ತಿ ಹೇಳಿದರು.
ನೋಟ್ಪ್ರಿಂಟ್ ಮಷಿನ್ ಜಟಾಪಟಿ
ರೈತರ ಸಾಲ ಮನ್ನಾ ಮಾಡಿ ಅಂದರೆ ನೋಟ್ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದು ಅಂದಿನ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಇದೇ ಬಿಜೆಪಿಯು ಅದಾನಿ-ಅಂಬಾನಿಯ ಸಾಲ ಮನ್ನಾ ಮಾಡಿತು. ಬೇಕಿದ್ದರೆ ದಾಖಲೆ ಕೊಡುವೆ ಎಂದು ವಿಧಾನ ಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯನ್ನು ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಸಿ.ಟಿ.ರವಿ ಕ್ರಿಯಾಲೋಪ ಎತ್ತಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ರವಿಕುಮಾರ್, ಭಾರತಿಶೆಟ್ಟಿ ಸಿಎಂ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಸಚಿವ ರಾಮಲಿಂಗಾರೆಡ್ಡಿ, ಸದಸ್ಯ ಪುಟ್ಟಣ್ಣ ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದರು. ಈ ವೇಳೆ ಗದ್ದಲ ಏರ್ಪಟ್ಟು ಪರಸ್ಪರ ಘೋಷಣೆ ಕೂಗಿದರು. ಸದಸ್ಯ ರವಿಕುಮಾರ್ ಮಾತನಾಡಿ, ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದು ನೀವೇ ಅಂತಿರಲಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಾನು ಸಾಲಮನ್ನದ ವಿಷಯಕ್ಕೆ ಆ ಮಾತು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
15 ಲಕ್ಷ ಹಣ ಹಾಕುವ ವಿಡಿಯೋ ಎಲ್ಲಿದೆ?
ವಿಧಾನಪರಿಷತ್ ಕಲಾಪದ ವೇಳೆ ಸಚಿವ ಸಂತೋಷ್ ಲಾಡ್ ಮೊಬೈಲ್ ಪ್ರದರ್ಶನ ಮಾಡಿದ್ದು ಕೋಲಾಹಲಕ್ಕೆ ಕಾರಣವಾಯಿತು. ಗ್ಯಾರಂಟಿ ಯೋಜನೆಗಳ ಪರ ವಿರೋಧದ ಚರ್ಚೆ ನಡುವೆ ಮೋದಿ ಅವರು 15 ಲಕ್ಷ ಹಣ ಜನರ ಖಾತೆ ಹಾಕುತ್ತೇನೆ ಎಂದು ಹೇಳಿ 11 ವರ್ಷವೇ ಆಯಿತು ಎಲ್ಲಿ ಹಣ ಎಂದು ಸಚಿವ ಸಂತೋಷ್ ಲಾಡ್ ಛೇಡಿಸುವ ಪ್ರಯತ್ನ ಮಾಡಿದಾಗ, ಮೋದಿ ಎಲ್ಲಿ ಹೇಳಿದ್ದಾರೆ? ಎಲ್ಲಿ ಸಾಕ್ಷಿ ತೋರಿಸಿ ಎಂದು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯೆ ಭಾರತಿಶೆಟ್ಟಿ ಸವಾಲು ಹಾಕಿದರು. ಈ ವೇಳೆ ಸಾಕ್ಷಿ ಇದೆ, ಬೇಕಾದರೆ ಯೂಟ್ಯೂಬ್ನಲ್ಲಿದೆ ನೋಡಿ ಎಂದು ಮೊಬೈಲ್ ತೆಗೆದು ವಿಡಿಯೋ ತೋರಿಸಲು ಸಚಿವರು ಮುಂದಾದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸಚಿವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ಮುಚ್ಚುವುದಿಲ್ಲ
ಶಿಕ್ಷಣ ಇಲಾಖೆಯಡಿ 11400 ಶಿಕ್ಷಕರ ಕೊರತೆ ಇದೆ. 6400 ಶಾಲೆಗಳಲ್ಲಿ ಏಕ ಶಿಕ್ಷಕರು ಇದ್ದಾರೆ. ಬಿಜೆಪಿ 4 ವರ್ಷದಲ್ಲಿ ಎಷ್ಟು ಜನ ಶಿಕ್ಷಕರ ನೇಮಕಾತಿ ಮಾಡಿದ್ದಾರೆಂದು ತಿಳಿಸಲಿ ಎಂದು ಸಿಎಂ ಸವಾಲು ಹಾಕಿದರು. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ವಿವಿಗಳನ್ನು ಮುಚ್ಚುವುದಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ವರದಿ ಬಂದ ನಂತರ ವಿವಿಗಳನ್ನು ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಧನ್ಯವಾದ ಅರ್ಪಿಸಿದ ಪ್ರತಿಪಕ್ಷ!
ದಲಿತರ ಪ್ರಗತಿಗೆ ಎಸ್ಸಿಪಿ, ಟಿಎಸ್ಪಿ ಕಾಯ್ದೆ ತಂದಿದ್ದು ಯಾರು ಎಂಬ ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ಸದಸ್ಯರು ನೀವೆ ಎಂದು ಮಾರುತ್ತರ ನೀಡಿದರು. ಕಾಯ್ದೆಯ ಕಲಂ 7ಡಿ ರದ್ದುಗೊಳಿಸಿದ್ದು ಯಾರು ಎಂಬ ಮರು ಪ್ರಶ್ನೆಗೆ ನೀವೇ ಸ್ವಾಮಿ ಎಂದು ಬಿಜೆಪಿ ಸದಸ್ಯರು ಧನ್ಯವಾದ ಅರ್ಪಿಸಿದ ಪ್ರಸಂಗ ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ, ಸಂವಿಧಾನದ ಆರ್ಟಿಕಲ್ 46ರಂತೆ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದೆ. ಮೊದಲು ಆಂಧ್ರಪ್ರದೇಶ, ನಂತರ ಕರ್ನಾಟಕ ಕಾಯ್ದೆ ಜಾರಿಗೆ ತಂದಿತು. ಈಗ ತೆಲಂಗಾಣ ಈ ಕಾಯ್ದೆ ಜಾರಿಗೆ ತಂದಿದ್ದು, ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯವೂ ಈ ಕಾಯ್ದೆ ಜಾರಿಗೆ ತಂದಿಲ್ಲ ಎಂದು ಸಿಎಂ ಟೀಕಿಸಿದರು.
ರಾಜ್ಯದಂತೆ ಎಸ್ಸಿಪಿ-ಟಿಎಸ್ಪಿ ಕಾಯ್ದೆಯನ್ನು ದೇಶದಲ್ಲೆಡೆ ತರಲು ಕೇಂದ್ರಕ್ಕೆ ಒತ್ತಾಯಿಸಿ ರೆಸುಲ್ಯೂಷನ್ ತರಲಿ, ನಾವೆಲ್ಲರೂ ಬೆಂಬಲಿಸುತ್ತೇವೆ ಎಂದರು. ಮುಂಬಡ್ತಿ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ವಿರೋಧಪಕ್ಷದವರು ದಲಿತರ ಪರ ಕೇವಲ ಮಾತಾಡಿ ಮೊಸಳೆ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಗುತ್ತಿಗೆಯಲ್ಲಿ ಎಸ್ಸಿಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ವಿರೋಧಪಕ್ಷದವರಿಗೆ ಇವರೆಡೆಗೆ ಬದ್ಧತೆ ಇಲ್ಲದೆ, ಅವರಿಗೆ ಪೂರಕವಾದ ಯಾವ ಕಾನೂನನ್ನು ತರಲಿಲ್ಲ ಎಂದು ದೂರಿದರು.
ಮುಖ್ಯಾಂಶ
- ಮನಮೋಹನ್ ಸಿಂಗ್ ಅವಧಿಯಲ್ಲಿ ಕಚ್ಛಾತೈಲದ ಬೆಲೆ ಹೆಚ್ಚಿದ್ದರೂ ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಇತ್ತು, ಈಗ ಕಚ್ಛಾ ತೈಲ ಬೆಲೆ ಕಡಿಮೆ ಇದ್ದರೂ ಮೋದಿ ಡೀಸೆಲ್-ಪೆಟ್ರೋಲ್ ಬೆಲೆ ವಿಪರೀತ ಹೆಚ್ಚಿಸಿದ್ದಾರೆ.
- ಕೃಷ್ಣಾ ಮೇಲ್ದಂಡೆ ಯೋಜನೆಗೆ ಐತೀರ್ಪ ಬಂದು 13 ವರ್ಷಗಳಾಗಿದೆ, ಆದರೆ ಕೇಂದ್ರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ.
- 7 ಸಾವಿರ ಕೋಟಿ ಬೆಲೆ ಏರಿಕೆ ಆಗಿರುವುದು ನಿಜ, ಆದರೆ ಬಿಜೆಪಿಯವರು 40 ಸಾವಿರ ಕೋಟಿ ತೆರಿಗೆ ಹೆಚ್ಚಿಸಿದ್ದಾರೆ ಎನ್ನುತ್ತಿರುವುದು ಪರಮ ಸುಳ್ಳು.
ಹದಗೆಟ್ಟ ಕಾನೂನು ಸುವ್ಯವಸ್ಥೆ, ಗೂಂಡಾ ರಾಜ್ಯ ನಿರ್ಮಾಣ
ರಾಜ್ಯದಲ್ಲಿ ತಲೆ ತಗ್ಗಿಸುವಂತಹ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದರೂ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಸರ್ಕಾರ ಬದುಕಿದೆಯೇ ಸತ್ತಿದೆಯೇ ಎಂಬ ಪ್ರಶ್ನೆ ಬರುತ್ತಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದೆ ಗೂಂಡಾ ರಾಜ್ಯ ಸೃಷ್ಟಿಯಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಯ ಮೇಲೆ ಸಚಿವರು ಅಥವಾ ಮುಖ್ಯಮಂತ್ರಿಗೆ ಸ್ವಲ್ಪವೂ ಹಿಡಿತವೇ ಇಲ್ಲ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಬಿಡದಿಯ ಟೊಯೋಟ ಕಂಪನಿಯ ಶೌಚಗೃಹದ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆಯಲಾಗಿದೆ. ಜತೆಗೆ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ನಿಂದಿಸಿ ಬರೆಯಲಾಗಿದೆ. ಇಂತಹ ಕಿಡಿಗೇಡಿಗಳಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದು ಬಹಳ ಪ್ರತಿಷ್ಠಿತ ಕಂಪನಿಯಾಗಿದ್ದು, ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಇದೆ. ಆದರೂ ಅದನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಇನ್ನೂ ಮಾಡಿಲ್ಲ ಎಂದು ಹೇಳಿದರು.
ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬದ ಸ್ನೇಹ ಲವ್ ಜಿಹಾದ್ನಲ್ಲಿ ಅಂತ್ಯವಾಗಿದೆ. ಹಾವೇರಿ ಜಿಲ್ಲೆಯ ಯುವತಿ ಸ್ವಾತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಲಾಗಿತ್ತು. ನಂತರ ಕಿಡಿಗೇಡಿ ಯುವಕರು ಮದುವೆಯ ಪ್ರಸ್ತಾಪ ಮಾಡಿ ಆಕೆಯನ್ನು ನಂಬಿಸಿದ್ದರು. ಬಳಿಕ ಆಕೆಯನ್ನು ಪಾಳು ಬಿದ್ದ ಶಾಲೆಗೆ ಕರೆದುಕೊಂಡು ಹೋಗಿ ಕೇಸರಿ ಟವೆಲ್ನಲ್ಲಿ ಸಾಯಿಸಿದ್ದಾರೆ. ಈ ಪ್ರಕರಣದ ಎಫ್ಐಆರ್ ಆದ ಬಳಿಕವೂ ತಾಯಿಗೆ ಮಾಹಿತಿ ನೀಡದೆ ಪೊಲೀಸರು ಪ್ರಕರಣ ಮುಚ್ಚಿಹಾಕಿದ್ದಾರೆ ಎಂದು ಆಪಾದಿಸಿದರು. ಈ ಲವ್ ಜಿಹಾದ್ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ನೇಹಾ ಲವ್ ಜಿಹಾದ್ ಘಟನೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿತ್ತು. ಲವ್ ಜಿಹಾದ್ ನಡೆಯುತ್ತಿದ್ದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಹಂಪಿಯಲ್ಲಿ ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ದೊಡ್ಡ ಸುದ್ದಿಯಾಗಿದೆ. ಈ ಘಟನೆಯಿಂದಾಗಿ ಪ್ರವಾಸಿಗರು ಬರುತ್ತಿಲ್ಲ. ಇದರಿಂದಾಗಿ ಹಂಪಿಗೆ ಕೆಟ್ಟ ಹೆಸರು ಬರುವುದರ ಜತೆಗೆ, ಆರ್ಥಿಕತೆ ಕುಸಿದಿದೆ. ಇಷ್ಟೆಲ್ಲ ಆದ ನಂತರವೂ, ವಿದೇಶಿಯರು ನಮ್ಮನ್ನು ಹೊಗಳಿದ್ದಾರೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದಾರೆ ಎಂದು ತಿವಿದರು.
ಇದು ನುಡಿದಂತೆ ನಡೆದ ಸರ್ಕಾರ ಅಲ್ಲ, ನುಡಿದಂತೆ ನಡೆಯದ ಸರ್ಕಾರ. ಬಜೆಟ್ ಅಂಕಿ-ಅಂಶಗಳು ಅವಾಸ್ತವಿಕವಾಗಿವೆ. ಸಾಲದ ಬಡ್ಡಿಯೇ 45,600 ಕೋಟಿ ರೂ.ಗಳಾಗಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳಲ್ಲಿ ಪೇಮೆಂಟ್ ಸೀಟೇ ಜಾಸ್ತಿ ಇದೆ. ಹೀಗಾಗಿ ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಿಲ್ಲ. 28 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಗುರಿ ಹೊಂದಲಾಗಿದೆ. ಇದು ಸಾಧ್ಯವೆ? ರಾಜ್ಯದ ಜನರನ್ನು ಸಾಲದ ಸುಳಿಗೆ ದೂಡುವ ಪ್ರಯತ್ನ ನಡೆದಿದೆ.
| ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ
ಪ್ರತಿಪಕ್ಷದ ನಾಯಕ ನಾಗಿದ್ದ ಸಮಯದಲ್ಲಿ ಸಾಲ ಮಾಡಿ ಹೋಳಿಗೆ ತಿನ್ನುವುದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ಸಾಲ ಮಾಡಿ ಯಾರಿಗೆ ಬಿರಿಯಾನಿ ತಿನ್ನಿಸಲು ಹೋಗಿದ್ದಾರೆ. ಈ ಬಾರಿಯ ಬಜೆಟ್ ಅನ್ನು ಹಲಾಲ್ ಬಜೆಟ್ ಎನ್ನಬಹುದು.
| ಅರವಿಂದ ಬೆಲ್ಲದ, ಬಿಜೆಪಿ ಶಾಸಕ
ಆಗ ನನಗೆ 11 ವರ್ಷ, 56 ಸಾವಿರ ರೂ. ವಿಮೆ ಹಣ! ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟ ನೆನೆದು ಥಮನ್ ಭಾವುಕ | Thaman