ಬಹುತೇಕರಿಗೆ ಬದುಕಿನಲ್ಲಿ ಸಂಕಷ್ಟಗಳಿಗೇನೂ ಬರವಿಲ್ಲ. ಅವುಗಳನ್ನು ಎದುರಿಸಲಾಗದೇ ಬದುಕೇ ಬೇಡ ಎಂದು ಕೊನೆಗೊಳಿಸಿದವರೂ ಕಡಿಮೆಯೇನಲ್ಲ. ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡ ಬಳಿಕ ಕಾಡುವ ಆ ಒಂಟಿತನ, ಅನಾಥ ಭಾವ ಎಂಥವರನ್ನೂ ಖಿನ್ನತೆಗೆ ದೂಡುವುದು ಸಹಜ. ವಯಸ್ಕರಿಗೇ ಇಂಥವನ್ನೆಲ್ಲ ತಡೆದುಕೊಳ್ಳಲಾಗದು. ಇನ್ನು ಮಕ್ಕಳ ವಿಚಾರಕ್ಕೆ ಬಂದರೆ, ಅವರು ತಾನೆ ಹೇಗೆ ತಡೆದುಕೊಳ್ಳಬಲ್ಲರು..
ಇದಕ್ಕೆ ಭಿನ್ನವಾಗಿ, ವಿಯೆಟ್ನಾಂ ಗ್ರಾಮೀಣ ಭಾಗದ ಪುಟಾಣಿಯೊಬ್ಬ ಎಲ್ಲರನ್ನು ಕಳೆದುಕೊಂಡರೂ ಧೃತಿಗೆಡದೆ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾನೆ. ಸಮಾಜವೂ ಆತನನ್ನು ಮುತುವರ್ಜಿಯಿಂದ ಗಮನಿಸುತ್ತಿದೆ. ಯಾರ ಮನೆಗೂ ದತ್ತುಪುತ್ರನಾಗಿ ಹೋಗದ ಆತನ ಸ್ವಾಭಿಮಾನ, ಹೋರಾಟದ ಮನೋಭಾವ ಜಗದ ಗಮನಸೆಳದಿದೆ.
ವಿಯೆಟ್ನಾಂನ ಈ ಬಾಲಕನ ಹೆಸರು ಡಂಗ್ ವಾನ್ ಖುಯೆನ್. ಆ ಬಾಲಕ ಹೇಳಿಕೊಂಡಂತೆ ಆತನ ಬದುಕು ಇದು-
“ನನಗೆ ಎರಡು ವರ್ಷ ವಯಸ್ಸಿದ್ದಾಗ ನನ್ನ ತಂದೆ ತೀರಿ ಹೋದರು. ಮನೆಯ ಆಧಾರ ಸ್ತಂಭವಾಗಿದ್ದ ತಂದೆಯ ಅನುಪಸ್ಥಿತಿ ನಮ್ಮೆಲ್ಲರನ್ನೂ ಕಾಡಿತು. ಆ ಮೇಲೆ, ನಾಲ್ಕು ವರ್ಷದನಿದ್ದಾಗ ತಾಯಿ ಇನ್ನೊಬ್ಬನನ್ನು ವಿವಾಹವಾಗಿ ಹೊರಟು ಹೋದರು. ಅಜ್ಜಿ ಜತೆ ಬದುಕುತ್ತಿದ್ದೆ. ಕಳೆದ ವರ್ಷ ಅಜ್ಜಿಯೂ ಬೇರೊಬ್ಬನ ಜತೆಗೆ ವಿವಾಹವಾಗಿ ಹೊರಟು ಹೋದರು. ನಾನೀಗ ಥನ್ಹ ಲಾಂಗ್ ಕಮ್ಯೂನ್ ಎಂಬಲ್ಲಿನ ಥನ್ಹ್ ಲಾಂಗ್ ಪ್ರೈಮರಿ ಸ್ಕೂಲ್ನಲ್ಲಿ ಐದನೇ ಇಯತ್ತೆ ಓದುತ್ತಿದ್ದೇನೆ. ಬಿದುರು ಮತ್ತು ಮರಗಳ ಕಂಬಗಳಿಂದ ನಿರ್ಮಿಸಲಾದ ಈ ಮನೆಯೇ ನನ್ನ ಸರ್ವಸ್ವ ಈಗ. ಇಲ್ಲೇ ಅಡುಗೆ ಮಾಡುತ್ತೇನೆ. ಪಕ್ಕದಲ್ಲೇ ಇರುವ ಜಮೀನನಲ್ಲಿ ನನಗೆ ಬೇಕಾದ ತರಕಾರಿ ಬೆಳೆಸುತ್ತೇನೆ. ಟೀಚರ್ ಒಬ್ಬರು ನನಗೆ ನೆರವಾಗುತ್ತಿದ್ದಾರೆ. ನೆರೆಹೊರೆಯವರು ನೀಡುವ ಅಕ್ಕಿ, ಬೇಳೆಯನ್ನು ಪಡೆದುಕೊಂಡು ಸ್ವತಃ ಅಡುಗೆ ಮಾಡಿ ನನ್ನ ಬದುಕು ನಾನೇ ಕಂಡುಕೊಳ್ಳುತ್ತಿದ್ದೇನೆ. ಯಾರ ಆಶ್ರಯವೂ ಇಲ್ಲದೇ ಬದುಕು ರೂಪಿಸುವಷ್ಟು ದೊಡ್ಡವನಾಗಿದ್ದೇನೆ ನಾನು” ಎಂಬ ಆತನ ಮಾತು ಕೇಳಿದ ಎಂಥವರ ಕಣ್ಣಲ್ಲೂ ನೀರು ಜಿನುಗದೇ ಇರದು.
ಬದುಕಿನ ಭವಿಷ್ಯದ ಬಗ್ಗೆ ಭಾರಿ ಕನಸುಕಟ್ಟಿಕೊಂಡಿರುವ ಈ ಬಾಲಕ ನಿತ್ಯವೂ ತನ್ನ ಸೈಕಲ್ ಏರಿ ಶಾಲೆಗೆ ಹೋಗುವುದನ್ನು ತಪ್ಪಿಸುವುದಿಲ್ಲ. ಮನೆಗೆ ಬಂದು ನಿತ್ಯದ ಕೆಲಸ ಮಾಡಿಕೊಂಡು ಕಲಿಕೆ ಮುಂದುವರಿಸುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಬದುಕನ್ನು ಇಷ್ಟು ಅರ್ಥಮಾಡಿಕೊಂಡು ಬದುಕಬಲ್ಲ ಈ ಬಾಲಕನ ಬಗ್ಗೆ ವಿಯೆಟ್ನಾಂ ಮಾಧ್ಯಮವೊಂದು ವಿಡಿಯೋವನ್ನು ಮಾಡಿ ಹಂಚಿಕೊಂಡಿದೆ.