10 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಚಾಮರಾಜನಗರ: ನಗರದ ನ್ಯೂ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ನಿಗ್ರಹ ಘಟಕದ (ಸಿಇಎನ್) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶನಿವಾರ ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನವನ್ನು ತಡೆದಾಗ ವಾಹನವನ್ನು ಬಿಟ್ಟು ಚಾಲಕ ಪರಾರಿಯಾದ. ಪರಿಶೀಲಿಸಿದಾಗ ಪಡಿತರ ಅಕ್ಕಿ ಇರುವುದು ಕಂಡು ಬಂತು ಎಂದು ಪೊಲೀಸರು ತಿಳಿಸಿದ್ದಾರೆ. ಸರಕು ಸಾಗಣೆ ವಾಹನ ಮತ್ತು ಅಕ್ಕಿಯನ್ನು ಪಟ್ಟಣ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ.

ಆಟೋ ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಅದರ ಚಾಲಕ ಮತ್ತು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜಣ್ಣ, ಎಎಸ್‌ಐ ಜಯಶಂಕರ್ ಹಾಗೂ ಪೇದೆಗಳು ಪಾಲ್ಗೊಂಡಿದ್ದರು.