ಅಮೃತಸರ ರೈಲು ಅವಘಡ: ರೈಲ್ವೆ ಹಳಿ ಬಳಿ 10 ತಿಂಗಳ ಗಂಡು ಮಗು ಪತ್ತೆ

ಅಮೃತಸರ: ದಸರಾ ಅಂಗವಾಗಿ ರಾವಣನ ಪ್ರತಿಮೆ ದಹನದ ವೇಳೆ ಹಳಿ ಮೇಲೆ ನಿಂತಿದ್ದವರ ಮೇಲೆ ರೈಲು ಹರಿದು ಸಂಭವಿಸಿದ ಅವಘಡದ ಬಳಿಕ ಹಲವಾರು ವಿಚಾರಗಳು ಬೆಳಕಿಗೆ ಬರುತ್ತಿದ್ದು, ರೈಲ್ವೆ ಹಳಿಯ ಬಳಿಯಲ್ಲಿ 10 ತಿಂಗಳ ಗಂಡು ಮಗು ಪತ್ತೆಯಾಗಿದೆ.

ಘಟನೆ ನಡೆದ ನಾಲ್ಕು ಗಂಟೆಗಳ ಬಳಿಕ ರೈಲ್ವೆ ಹಳಿಯ ಹತ್ತಿರ ಮಗುವನ್ನು ಪೊಲೀಸರು ರಕ್ಷಿಸಿದ್ದು, ಇದುವರೆಗೂ ಮಗುವಿನ ಪಾಲಕರು ಯಾರು ಎಂಬುದು ಪತ್ತೆಯಾಗಿಲ್ಲ. ಮಗುವಿನ ಪಾಲಕರ ಕುರಿತು ಮಾಹಿತಿ ಲಭ್ಯವಾದರೆ 0183 2220205 ನಂಬರಿಗೆ ಕರೆ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ.

ಸದ್ಯ ಮಗುವಿನ ಹಣೆಯ ಮೇಲೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಮೃತಸರದ ಗುರುನಾನಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದು ವೇಳೆ ಮಗುವಿನ ಪಾಲಕರು ಪತ್ತೆಯಾಗದೇ ಹೋದರೆ ಮಗುವನ್ನು ದತ್ತು ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಯಾನಕ ರೈಲು ಅವಘಡದಲ್ಲಿ ಇದುವರೆಗೂ ಹಲವರು ಕಾಣೆಯಾಗಿರುವ ಕುರಿತು ಅಮೃತಸರದ ವಿವಿಧೆಡೆಯ ಪೊಲೀಸ್‌ ಠಾಣೆಗಳಿಗೆ 20ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಘಟನೆಯಿಂದಾಗಿ ಕಾಣೆಯಾಗಿರುವ ಕುಟುಂಬ ಸದಸ್ಯರ ಹುಡುಕಾಟಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಜನರು ಅಲೆದಾಡುತ್ತಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅವಘಡದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳ ಹಿನ್ನೆಲೆಯನ್ನು ತಿಳಿಯುವಂತೆ ಮತ್ತು ನಿರ್ಧಿಷ್ಟ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಘೋಷಿಸಿರುವ ಪರಿಹಾರದ ಹಣ ಶೀಘ್ರ ಕೈಸೇರುವಂತೆ ಮಾಡಿ ಎಂದಿದ್ದಾರೆ. (ಏಜೆನ್ಸೀಸ್)