ಗುಜರಾತ್​ನಲ್ಲಿ ಪಬ್​ಜಿ ಗೇಮ್​​ ಆಡುತ್ತಿದ್ದ 10 ಜನರ ಬಂಧನ

ಅಹಮದಾಬಾದ್: ದೇಶದಲ್ಲಿ ಹೊಸ ಕ್ರೇಜ್​ ಸೃಷ್ಟಿಸಿರುವ ಪಬ್​ಜಿ ಗೇಮ್​ ಆಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗುಜರಾತ್​ ಪೊಲೀಸರು ಮುಂದಾಗಿದ್ದು, ಗೇಮ್​ ಆಡುತ್ತಿದ್ದ 10 ಜನರನ್ನು ಬಂಧಿಸಿದ್ದಾರೆ.

ಪಬ್​ಜಿ ಗೇಮ್​ ಅನ್ನು ದೇಶದ ಹಲವು ನಗರಗಳಲ್ಲಿ ನಿಷೇಧಿಸಲಾಗಿದೆ. ಅದರಂತೆ ಗುಜರಾತ್​ನ ಸೂರತ್​, ರಾಜ್​ಕೋಟ್​ ಮತ್ತು ವಡೋದರಾಗಳಲ್ಲಿ ಕಳೆದ ವಾರ ಗೇಮ್​ ಮೇಲೆ ನಿಷೇಧ ಹೇರಲಾಗಿದೆ. ಆ ನಂತರ ಗುಜರಾತ್​ನ ಹಲವು ನಗರಗಳಲ್ಲಿ ಪಬ್​ಜಿ ಮತ್ತು ಮೋಮೋ ಚಾಲೆಂಜ್​ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೋಟ್​ ಪೊಲೀಸರು ಗೇಮ್​ ಆಡುತ್ತಿದ್ದ 6 ವಿದ್ಯಾರ್ಥಿಗಳು ಸೇರಿದಂತೆ 10 ಜನರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಯುವಕರಲ್ಲಿ ಹಲವರು ತಮ್ಮ ಸುತ್ತಲಿನ ಪ್ರಪಂಚದ ಪರಿವೇ ಇಲ್ಲದೆ ಗೇಮ್​ ಆಡುವುದರಲ್ಲಿ ಮಗ್ನರಾಗಿದ್ದರು. ನಾವು ಬಂಧಿಸಲು ಅವರ ಬಳಿ ತೆರಳಿದಾಗಲೂ ಅವರಿಗೆ ನಾವು ಅಲ್ಲಿರುವುದರ ಅರಿವು ಇರಲಿಲ್ಲ. ಈ ಗೇಮ್​ ಒಂದು ವಿಧಧ ವ್ಯಸನವಾಗಿದ್ದು, ಬಂಧಿತರು ದಿನದ ಬಹುತೇಕ ಸಮಯವನ್ನು ಗೇಮ್​ ಆಡುವುದರಲ್ಲಿ ಕಳೆಯುತ್ತಿದ್ದರು. ಬಂಧಿತರ ಮೊಬೈಲ್​ ಫೋನ್​ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ರೋಹಿತ್​ ರಾವಲ್​ ತಿಳಿಸಿದ್ದಾರೆ.

One Reply to “ಗುಜರಾತ್​ನಲ್ಲಿ ಪಬ್​ಜಿ ಗೇಮ್​​ ಆಡುತ್ತಿದ್ದ 10 ಜನರ ಬಂಧನ”

Comments are closed.