10 ದಿನದೊಳಗೆ ಸಿಲಿಂಡರ್ ವಿತರಿಸಿ

ಹೊಳೆಆಲೂರ: ನರಗುಂದ ಮತಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ರೂಪಿಸುವ ಯೋಜನೆಗಳನ್ನು ಅಧಿಕಾರಿಗಳು ಯಾವುದೇ ಪಕ್ಷ ಭೇದ ಮಾಡದೆ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸದಿದ್ದರೆ ರಾಜೀನಾಮೆ ನೀಡಿ ಮನೆಗೆ ತೆರಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅವರು ಅಧಿಕಾರಿಗಳ ವಿರುದ್ಧ ಗರಂ ಆಗಿ ಮಾತನಾಡಿದರು.

ಹೊಳೆಮಣ್ಣೂರ ಗ್ರಾಮಸ್ಥರಿಂದ ಗ್ರಾಮದಲ್ಲಿ ಭಾನುವಾರ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಉಜ್ವಲ ಯೋಜನೆ ಅಡಿ ಗ್ರಾಮದ 80 ಕುಟುಂಬಗಳಿಗೆ ಸಿಲಿಂಡರ್ ಮಂಜೂರು ಅಗಿದ್ದರೂ ಗ್ರಾಪಂ ಪಿಡಿಒ ಸೂಕ್ತ ಮಾಹಿತಿ ಒದಗಿಸದ ಕಾರಣ ಫಲಾನುಭವಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಇದರಿಂದ ಶಾಸಕರು ಕೋಪಗೊಂಡು ಪಿಡಿಒ ಅವರನ್ನು ವೇದಿಕೆಗೆ ಕರೆಯಿಸಿ ‘ಇನ್ನು 10 ದಿನದಲ್ಲಿ ಎಲ್ಲ 80 ಕುಟುಂಬಗಳಿಗೆ ಸಿಲಿಂಡರ್ ನೀಡದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ನಿಮ್ಮನ್ನು ಮನೆಗೆ ಕಳಿಸಬೇಕಾದಿತು’ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಶೀಘ್ರ ಬದಲಾವಣೆಯ ಗಾಳಿ ಬೀಸಲಿದ್ದು, ಅಪವಿತ್ರ ಮೈತ್ರಿ ಸರ್ಕಾರ ಪತನಗೊಳ್ಳಲಿದೆ. ರಾಜ್ಯದ ಪರ ಮಹಾದಾಯಿ ಸಮಾಧಾನಕರ ತೀರ್ಪು ಬಂದಿದೆ. ಮತಕ್ಷೇತ್ರದ ಕಾಲುವೆಗಳನ್ನು ಶೀಘ್ರ ಆಧುನೀಕರಣಗೊಳಿಸಲಾಗುವುದು. ಗ್ರಾಮದೇವಿ ಸಮುದಾಯ ಭವನಕ್ಕೆ 5 ಲಕ್ಷ ರೂ., ಹಿಂದುಳಿದ ವರ್ಗದ ಸಮುದಾಯ ಭವನಕ್ಕೆ 5 ಲಕ್ಷ ರೂ. ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಪ್ರೇಮಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ತಾ.ಪಂ. ಸದಸ್ಯ ಜಗದೀಶ ಬ್ಯಾಡಗಿ, ಹೊಳೆಆಲೂರ ಮಂಡಲ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಸಿದ್ದಯ್ಯ ಮಠಪತಿ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷಿ್ಮೕ ಗಾಣಿಗೇರ, ಲಿಂಗಬಸು ಅಂಗಡಿ, ಡಿ.ಕೆ. ಕುಲಕರ್ಣಿ, ಗ್ರಾ.ಪಂ. ಸದಸ್ಯ ಯಲ್ಲಪ್ಪ ನಾಯಕ, ಅಲ್ಲಯ್ಯ ಪಟ್ಟದಕಲ್ಲ, ಎ.ಪಿ.ಎಂ.ಸಿ. ಸದಸ್ಯ ಚಂದ್ರು ದಂಡಿನ, ಸಂಕಪ್ಪ ಕರಿಗೌಡ್ರ ಉಪಸ್ಥಿತರಿದ್ದರು.