ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮೇ 18ರಂದು ಆಶ್ರಯ ಸೇವಾ ಸಂಸ್ಥೆಯಿಂದ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವ ವಧು-ವರರಿಗೆ ಮಾಜಿ ಸಚಿವೆ ಮೋಟಮ್ಮ ಶನಿವಾರ ವಸ್ತ್ರ ವಿತರಿಸಿದರು.
ಶಾಸಕಿ ನಯನಾ ಮೋಟಮ್ಮ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ವಧು-ವರರಿಗೆ ಬಟ್ಟೆ, ಮದುವೆ ಪರಿಕರ ವಿತರಿಸಲಾಯಿತು. ವಧುವಿಗೆ ಬಳೆ ತೊಡಿಸಿ ಅರಿಶಿಣ-ಕುಂಕುಮ ನೀಡಿ, ಶಾಸ್ತ್ರೋಕ್ತವಾಗಿ ವಸ್ತ್ರವನ್ನು ವಿತರಿಸಿದರು.
ನಂತರ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮದುವೆ ಜೀವನದ ಪ್ರಮುಖ ಘಟ್ಟ. ಮದುವೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕಿ, ಅದರಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುವ ಹಲವು ಕುಟುಂಬಗಳಿವೆ. ಈ ಕಾರಣಕ್ಕಾಗಿ 1994ರಿಂದ ಪಟ್ಟಣದಲ್ಲಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಯಾರೊಬ್ಬರೂ ಸಾಲ ಮಾಡದೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಒಂದೆರಡು ವರ್ಷ ಕಾರಣಾಂತರದಿಂದ ಸಾಮೂಹಿಕ ವಿವಾಹ ನಡೆಸಲು ಸಾಧ್ಯವಾಗಿರಲಿಲ್ಲ. ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದಾಗ ಹಲವು ಮಹಿಳೆಯರು ಸಾಮೂಹಿಕ ವಿವಾಹ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಬಗ್ಗೆ ವಿಚಾರಿಸಿದ್ದಾರೆ. ಈ ಬಾರಿ 5 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡುವ ಯೋಜನೆ ರೂಪಿಸಲಾಗಿತ್ತು. ವಿವಾಹ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 10 ಜೋಡಿಗೆ ಅವಕಾಶ ಕಲ್ಪಿಸಲಾಗಿದೆ. ಮಲೆನಾಡಿನ ಸಂಪ್ರದಾಯದಂತೆ ದಲಿತ ಪುರೋಹಿತರು ವಿವಾಹ ನಡೆಸಿಕೊಡಲಿದ್ದಾರೆ. ಎಲ್ಲ ವಧು-ವರರಿಗೆ ಬಟ್ಟೆ, ಚಿನ್ನದ ಮಾಂಗಲ್ಯ ಸೇರಿದಂತೆ ಮದುವೆ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಂ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯೆ ಬಿ.ಕೆ.ಜಯಮ್ಮ, ಕೆಡಿಪಿ ಜಿಲ್ಲಾ ಸದಸ್ಯ ಸುಧೀರ್ ಚಕ್ರಮಣಿ, ಬಿ.ಎಂ.ಶಂಕರ್, ಕೋಮರಾಜ್, ಸುಬ್ರಹ್ಮಣ್ಯ ಇತರರಿದ್ದರು.
