10 ಅಡಿ ಮೇಲಕ್ಕೆಗರಿದ ಎತ್ತಿನಗಾಡಿ!: ಬೆಳವಾಡಿಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಅವಘಡ

ಹಾಸನ: ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ಯಲ್ಲಿ ಗದ್ದೆ ಬದುವಿಗೆ ಚಕ್ರಗಳು ಗುದ್ದಿದ ಗಾಡಿಯೊಂದು ಸಿನಿಮೀಯ ರೀತಿಯಲ್ಲಿ 10 ಅಡಿಗಳಷ್ಟು ಎತ್ತರಕ್ಕೆ ಎಗರಿ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಾಡಿ ಚಲಾಯಿಸುತ್ತಿದ್ದ ರಮೇಶ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎತ್ತಿನ ಗಾಡಿಗೆ ಸ್ವಲ್ಪ ಮಟ್ಟಿನ ಜಖಂ ಆಗಿದೆ. ಗ್ರಾಮದಲ್ಲಿ ಪ್ರತಿ ವರ್ಷದಂತೆ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಮೇಶ್ ಎಂಬುವರ ಟೈರ್ ಗಾಡಿ ಸರದಿ ಬಂದಾಗ ಎತ್ತುಗಳು ವೇಗವಾಗಿ ಓಡುತ್ತಾ ನಿಗದಿತ ಪಥದಿಂದ ಸ್ವಲ್ಪ ಬಲಕ್ಕೆ ಚಲಿಸಿದವು. ಇದರಿಂದ ಗದ್ದೆ ಬದುವಿಗೆ ಚಕ್ರಗಳು ಗುದ್ದಿದಂತಾಗಿ ಗಾಡಿ ಗಾಳಿಯಲ್ಲಿ ಹಾರಿತು. ಗಾಡಿ ಓಡಿಸುತ್ತಿದ್ದ ರಮೇಶ್ ಮೇಲಕ್ಕೆ ಚಿಮ್ಮಿ ಬಲಕ್ಕೆ ಬಿದ್ದರು. ಗಾಡಿ ಪಲ್ಟಿಯಾಯಿತು.

ಬೆದರಿದ ಎತ್ತುಗಳು ಕೆಲವು ಮೀಟರ್​ಗಳವರೆಗೆ ಗಾಡಿಯನ್ನು ಹಾಗೇ ಎಳೆದೊಯ್ದವು. ಕೆಳಗೆ ಬಿದ್ದರೂ ಆಘಾತಗೊಳ್ಳದ ರಮೇಶ್, ತಕ್ಷಣವೇ ಮೇಲೆದ್ದು ಎತ್ತುಗಳನ್ನು ನಿಯಂತ್ರಿಸಿದರು.