10ರಿಂದ ಜಿಲ್ಲೆಗೆ ಮತ್ತೆ ಹರಿಯಲಿದೆ ಹೇಮಾವತಿ ನೀರು

ಗುಬ್ಬಿ: ಡಿ.10ರಿಂದ ಜಿಲ್ಲೆಗೆ ಹೇಮಾವತಿ ನೀರು ಮತ್ತೆ ಹರಿಯಲಿದ್ದು, ಎಲ್ಲ ಕೆರೆ ತುಂಬಿಸಿಕೊಳ್ಳಲಾಗುವುದು ಎಂದು ಸಣ್ಣಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.

ಜನಕದೇವನಹಳ್ಳಿಯಲ್ಲಿ ಸೋಮವಾರ ವಾಲ್ಮಿಕಿ ಸಮುದಾಯ ಭವನ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಿದ್ದು, ಶೀಘ್ರ ರೈತರಿಗೆ ತೀರುವಳಿ ಪತ್ರ ಸಿಗಲಿದೆ. ಚುನಾವಣೆ ಸಂದರ್ಭ ರಾಮಮಂದಿರ ನಿರ್ವಣದ ಬಗ್ಗೆ ಮಾತನಾಡುವ ಬಿಜೆಪಿ ಇಷ್ಟು ದಿನ ಏನು ಮಾಡುತಿತ್ತು. ಜನರ ಭಾವನೆಗಳ ಜತೆ ಆಟವಾಡಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ ಎಂದು ಟೀಕಿಸಿದರು.

ಜಿಪಂ ಸದಸ್ಯೆ ಯಶೋದಮ್ಮ, ತಾಪಂ ಸದಸ್ಯ ದೇವರಾಜು, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಸದಸ್ಯ ರಾಜಣ್ಣ, ಚಂದ್ರಯ್ಯ, ಸ್ಥಳೀಯರಾದ ಸಣ್ಣರಂಗಯ್ಯ, ಪಾಂಡುರಂಗಯ್ಯ, ಮೀಸೆನಂಜಪ್ಪ ನಾಗರಾಜು, ಯೋಗಾನಂದ್, ಬಸವರಾಜು ಮತ್ತಿತರರಿದ್ದರು.

ಒತ್ತಡ ತಂತ್ರಗಳಿಗೆ ಜಗ್ಗಲ್ಲ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಉಪವಾಸ ಮಾಡಿದ್ದಾಯಿತು, ಬಂದ್ ಕೂಡ ಆಯಿತು. ಇಂತಹ ಒತ್ತಡ ತಂತ್ರಗಳಿಗೆ ಜಗ್ಗುವುದಿಲ್ಲ ಎಂದು ಎಸ್.ಆರ್.ಶ್ರೀನಿವಾಸ್ ಹೇಳಿದರು. ಶಾಸನಸಭೆ ಮರಳುನೀತಿ ರೂಪಿಸಿದ್ದು, ಅದರಂತೆಯೇ ಎಲ್ಲರೂ ನಡೆದುಕೊಳ್ಳಬೇಕು. ಹೊನ್ನಾಳಿಗೆ ಪ್ರತ್ಯೇಕ ಕಾನೂನು ರೂಪಿಸಲು ಸಾಧ್ಯವಿಲ್ಲ. ಸಾಮಾನ್ಯ ಜನರಿಗೆ ಮರಳು ಸಿಗುತ್ತಿದೆ. ಈಗಾಗಲೇ ಅಲ್ಲಿ ಎಲ್ಲರೂ ಮರಳನ್ನು ಚೆನ್ನಾಗಿ ಮೇಯ್ದಿದ್ದಾರೆ. ನನಗೂ ಮಾಡಿ ಎನ್ನುತ್ತಾರೆ ಇದಕ್ಕೆ ನಾನು ಸಿದ್ಧನಿಲ್ಲ ಕಾನೂನು ಪ್ರಕಾರ ನಡೆಯುತ್ತೇವೆ ಎಂದರು.