10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ

ಲಕ್ಷ್ಮೇಶ್ವರ: ಸಮೀಪದ ಕೊಕ್ಕರಗೊಂದಿ ಗ್ರಾಮದಲ್ಲಿ ವಾಂತಿಬೇಧಿಯಿಂದಾಗಿ 10ಕ್ಕೂ ಹೆಚ್ಚು ಜನ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ದಾಖಲಾಗಿದ್ದಾರೆ.

ಗ್ರಾಮದ ಅನ್ನಪೂರ್ಣ ಪಾಟೀಲ, ಚೈತ್ರಾ ಪಾಟೀಲ, ನೀಲವ್ವ ಪಾಟೀಲ, ಶಶಿಕಲಾ ಪಾಟೀಲ, ಶೇಖವ್ವ ಪಾಟೀಲ, ತಿಪ್ಪನಗೌಡ ಪಾಟೀಲ, ಸಾವಂತೆವ್ವ ಪಾಟೀಲ, ಶ್ರೀನಾಥಗೌಡ ಪಾಟೀಲ ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ತಾಪಂ ಇಒ ಆರ್.ವೈ. ಗುರಿಕಾರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದಲ್ಲಿರುವ ಬೇರೆಬೇರೆ ಬೋರ್​ವೆಲ್​ಗಳ ನೀರು ಪೂರೈಕೆ ಮತ್ತು ಅಲ್ಲಲ್ಲಿ ಪೈಪ್ ಒಡೆದು ಸೋರಿಕೆಯಾಗಿ ಕಲುಷಿತ ನೀರು ಸರಬರಾಜಾಗುತ್ತಿದೆ. ಅದನ್ನು ಕುಡಿದ 10ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿದೆ ಎಂದು ಗ್ರಾಮದ ಶಂಭುಗೌಡ ಶಿರಹಟ್ಟಿ, ನಾಗನಗೌಡ ಪಾಟೀಲ ಮತ್ತಿತರರು ದೂರಿದ್ದಾರೆ.

ಹೆಚ್ಚುತ್ತಿರುವ ಬಿಸಿಲು, ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ವಾಂತಿಬೇಧಿಗೆ ತುತ್ತಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ಶೆಟ್ಟಿಕೇರಿ ಗ್ರಾಮದ ಫಕೀರಪ್ಪ ಲಮಾಣಿ, ಆದ್ರಳ್ಳಿ ತಾಂಡಾದ ಕಮಲವ್ವ ಲಮಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಕ್ಕರಗೊಂದಿ ಗ್ರಾಮಕ್ಕೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಘಟನೆಗೆ ನೀರು ಕಾರಣವೋ ಅಥವಾ ಆಹಾರ ಕಾರಣವೋ ಎಂಬುದು ಪರೀಕ್ಷೆಯಿಂದ ತಿಳಿಯಲಿದೆ. ಆದಾಗ್ಯೂ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

| ಶ್ರೀಕಾಂತ ಕಾಟೆವಾಲೆ, ತಾಲೂಕು ವೈದ್ಯಾಧಿಕಾರಿ

Leave a Reply

Your email address will not be published. Required fields are marked *