ಒಂದನೇ ತರಗತಿ ಸೇರ್ಪಡೆಗೆ 1000 ರೂ. ಕೊಡುಗೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣದಿಂದ ಬಹುತೇಕ ಕನ್ನಡ ಮಾಧ್ಯಮ ಶಾಲೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಮುಂಡ್ಕೂರು ಗ್ರಾಪಂ ನಿವೃತ್ತ ಗ್ರಾಮ ಕರಣಿಕ ಅವಿಲ್ ಡಿಸೋಜ ಕನ್ನಡ ಮಾಧ್ಯಮ ಶಾಲೆ ಉಳಿಸಲು ಹೊಸ ಆಂದೋಲನಕ್ಕೆ ಕೈ ಹಾಕಿದ್ದಾರೆ. ಕಾರ್ಕಳ ತಾಲೂಕಿನ 120 ವರ್ಷಗಳ ಇತಿಹಾಸವುಳ್ಳ ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲಿರುವ ವಿದ್ಯಾರ್ಥಿಗಳಿಗೆ ತಲಾ 1000 ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈಗಾಗಲೇ ಹಳೇ ವಿದ್ಯಾರ್ಥಿಗಳನ್ನೊಳಗೊಂಡ ನಮ್ಮ ಫ್ರೆಂಡ್ಸ್ ಮುಂಡ್ಕೂರು ಬಳಗ ಇದೇ ಮಾದರಿ ಘೋಷಣೆ ಮಾಡಿದ್ದು, ಈ ಮೂಲಕ ಮುಂಡ್ಕೂರಿನ ಕನ್ನಡ ಮಾಧ್ಯಮ ಶಾಲೆಯ ಒಂದನೇ ತರಗತಿಗೆ ಈ ಬಾರಿ ಸೇರ್ಪಡೆಗೊಳ್ಳಲಿರುವ ಪ್ರತಿ ಮಗುವಿಗೆ ತಲಾ 2000 ರೂ. ಸಿಗಲಿದೆ.

ಸಾಮಾಜಿಕ ಕಳಕಳಿ: ಮುಂಡ್ಕೂರು ಗ್ರಾಪಂ ಸಹಿತ ವಿವಿಧೆಡೆ ಗ್ರಾಮ ಕರಣಿಕರಾಗಿ, ಮುಂಡ್ಕೂರು ಗ್ರಾಪಂ ಕಾರ್ಯದರ್ಶಿಯಾಗಿ ನಿವೃತ್ತರಾದ ಬಳಿಕ ಸಾಮಾಜಿಕ ಕಳಕಳಿ ಮೂಲಕ ಸಮಾಜದ ನೂರಾರು ಅಶಕ್ತರಿಗೆ ನೆರವಾಗಿದ್ದರು. ಕಳೆದ ವರ್ಷ ಇದೇ ಶಾಲೆ ವಿದ್ಯಾರ್ಥಿಗಳ ವಾಹನ ನಿರ್ವಹಣೆಗೆ, ಕ್ರೀಡಾ ಚಟುವಟಿಕೆಗಳಿಗೆ ಅರ್ಥಿಕ ಸಹಾಯ ನೀಡಿದ್ದ ಅವಿಲ್, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಸಂಘಟಿಸಿ ವಿವಿಧ ಸಾಧಕರಿಗೆ, ಸಮಾಜದ ಅಶಕ್ತರಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಸುಮಾರು 1 ಲಕ್ಷ ರೂ. ದೇಣಿಗೆ ನೀಡಿದ್ದರು. ಇತ್ತೀಚೆಗೆ ಸಂಕಲಕರಿಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ ಅಪಘಾತಕ್ಕೀಡಾಗಿ ತೊಂದರೆ ಅನುಭವಿಸಿದ ಕುಟುಂಬಕ್ಕೂ ಧನ ಸಹಾಯ ನೀಡಿದ್ದರು.

ಅವಿಲ್ ಡಿಸೋಜ ಈ ಹಿಂದೆಯೂ ನಮ್ಮ ಶಾಲೆಗೆ ಕೊಡುಗೆ ನೀಡಿದ್ದರು. ಇಂಥ ಶಿಕ್ಷಣ ಪ್ರೇಮಿಗಳು ಸಹಕಾರ ನೀಡಿದರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯಲು ಸಾಧ್ಯ.
ಪೂರ್ಣಿಮಾ ಭಟ್  ಮುಂಡ್ಕೂರು ಶಾಲಾ ಮುಖ್ಯ ಶಿಕ್ಷಕಿ

120 ವರ್ಷಗಳ ಇತಿಹಾಸವಿರುವ ನಮ್ಮೂರ ಕನ್ನಡ ಶಾಲೆ ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಇನ್ನೂ ಸುಭದ್ರವಾಗಿದೆ. ಮುಂದೆಯೂ ಶಿಕ್ಷಣ ಪ್ರೇಮಿಗಳ ಬೆಂಬಲ ಅಗತ್ಯ.
ದಿನೇಶ್ ಆಚಾರ್ಯ ಎಸ್‌ಡಿಎಂಸಿ ಅಧ್ಯಕ್ಷ

Leave a Reply

Your email address will not be published. Required fields are marked *