ಬೆಂಗಳೂರು: ವಲಸೆ ಕಾರ್ವಿುಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಕೆಪಿಸಿಸಿ ವತಿಯಿಂದ ಕೆಎಸ್ಆರ್ಟಿಸಿಗೆ 1 ಕೋಟಿ ರೂ. ಚೆಕ್ ಅನ್ನು ದೇಣಿಗೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ನೀಡಿದ್ದಾರೆ. ಈ ಬೆನ್ನಲ್ಲೇ ಮೆಜೆಸ್ಟಿಕ್ಗೆ ಬಂದ ಕಾಂಗ್ರೆಸ್ ನಿಯೋಗ ಬಸ್ ನಿಲ್ದಾಣದಲ್ಲಿ ಕಾರ್ಮಿಕರ ಕಷ್ಟ ಆಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ಬಸ್ ಹತ್ತಿ ಪ್ರಯಾಣಿಕರ ಯೋಗಕ್ಷೇಮವನ್ನೂ ವಿಚಾರಿಸಿತು.
ಕರೊನಾ ಲಾಕ್ಡೌನ್ ಪರಿಣಾಮ ತಿಂಗಳಿಂದ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಬದುಕುದೂಡಲು ಪರದಾಡುತ್ತಿದ್ದ ಕಾರ್ವಿುಕರನ್ನು ಊರಿಗೆ ಕಳಿಸಲು ಇದಕ್ಕೂ ಮೊದಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತಾದರೂ ಶನಿವಾರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದ ಕಾರ್ವಿುಕರು ಬಸ್ ದರ ದುಪ್ಪಟ್ಟಾಗಿದ್ದನ್ನು ಕೇಳಿ ಬೆಚ್ಚಿಬಿದ್ದರು. ಕೆಲವರು ದುಪ್ಪಟ್ಟು ಹಣ ಕೊಟ್ಟು ಹೋದರಾದರೂ ಸಾವಿರಾರು ಮಂದಿ ಹಣ ಇಲ್ಲದೆ ಬಸ್ ನಿಲ್ದಾಣದಲ್ಲೇ ಅಸಹಾಯಕರಾಗಿ ಕುಳಿತ್ತಿದ್ದರು.
ಇದನ್ನೂ ಓದಿ ವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್
ಇದನ್ನು ಪರಿಶೀಲಿಸಲು ಶನಿವಾರ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಡಿ.ಕೆ. ಶಿವಕುಮಾರ್ ಬಸ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕಾಮಿರ್ಕರ ನೆರವಿಗೆ ಸರ್ಕಾರ ಧಾವಿಸಬೇಕು. ಸರ್ಕಾರಕ್ಕೆ ಹಣ ಬೇಕಿದ್ದರೆ ಭಿಕ್ಷೆ ಬೇಡಿಯಾದರೂ ಕೊಡಲಾಗುವುದು. ಮೊದಲು ಬಡಜನರ ಕಷ್ಟ ಆಲಿಸಿ ಎಂದು ಡಿಕೆಶಿ ಅಸಮಾಧಾನ ಹೊರಹಾಕಿದ್ದರು. ಈಗ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಈ ವೇಳೆ ಡಿಕೆಶಿ ಮಾತನಾಡಿ, ಎರಡು ದಿನಗಳ ಹಿಂದೆ ಕಾರ್ಮಿಕರಿಗೆ ಉಚಿತ ಪ್ರಯಾಣದ ಮೂಲಕ ಕಳುಹಿಸುವಂತೆ ಸಿಎಂಗೆ ಮನವಿ ಮಾಡಿದ್ದೆ. ಆಗ ಸರ್ಕಾರ ಸ್ಪಂದನೆ ನೀಡಲಿಲ್ಲ. ಕಾರ್ವಿುಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಬೇಕು. ಸರ್ಕಾರದಲ್ಲಿ ಮೇಧಾವಿ ಮಂತ್ರಿಗಳಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪತ್ರದ ಸಮೇತ KSRTC ಗೆ 1 ಕೋಟಿ ರೂಪಾಯಿ ಚೆಕ್ ನೀಡಿದ್ದೇನೆ. ಇದನ್ನ ಕಾರ್ಮಿಕರ ಉಚಿತ ಸಂಚಾರಕ್ಕೆ ಬಳಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ ಆಗಸ್ಟ್ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ?
ಇನ್ನು ಊರಿಗೆ ಹೊರಟ ಕಾರ್ಮಿಕರ ಸಂಕಷ್ಟ ಆಲಿಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆಯೇ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಾವು ಮನವಿ ಮಾಡಿದರೂ ಸರ್ಕಾರ ಆಗಲ್ಲ ಎಂದಿತ್ತು. ಬಳಿಕ ರಿಯಾಯಿತಿ ದರದಲ್ಲಿ ಕಳಿಸುವುದಾಗಿ ಹೇಳಿತು. ನಾವೇ ಹಣ ಕೊಡಲು ನಿರ್ಧರಿಸಿದೆವು. ಅಷ್ಟರಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದರು.
ಕೈ ನಿಯೋಗ ಯಡವಟ್ಟು: ಮೆಜೆಸ್ಟಿಕ್ಗೆ ಮಧ್ಯಾಹ್ನ ಸುಮಾರು 12ಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಕಾರ್ವಿುಕರ ಕಷ್ಟ ಆಲಿಸುತ್ತಿದೆ. ಆದರೆ, ಈ ವೇಳೆ ನೂಕುನುಗ್ಗಲು ಏರ್ಪಟ್ಟು ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು. ನಿಯೋಗದಲ್ಲಿ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಅಜಯ್ ಸಿಂಗ್, ಬೈರತಿ ಸುರೇಶ್, ನಾರಾಯಣ ಸ್ವಾಮಿ ಇದ್ದರು.
ಇದನ್ನೂ ಓದಿ ಕೋತಿಗಳೇ ಮದ್ಯ ಕುಡಿದಿವೆ!..ಈ ಉತ್ತರ ನಂಬಬಹುದಾ?