ಹಿಮದಡಿ ಸಿಲುಕಿದ ಐವರು ಯೋಧರು, ಓರ್ವ ಯೋಧ ಸಾವು

ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಮ್ಗ್ಯಾ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ಒಬ್ಬ ಭಾರತೀಯ ಯೋಧ ಮೃತಪಟ್ಟಿದ್ದು, ಐವರು ಹಿಮದಡಿ ಸಿಲುಕಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಮಕುಸಿತವಾಗಿದ್ದು, ಹಿಮದಡಿ ಆರು ಜನ ಯೋಧರು ಸಿಲುಕಿಕೊಂಡಿದ್ದರು. ಹಿಮದಡಿ ಸಿಲುಕಿದ್ದ ಒಬ್ಬರನ್ನು ರಕ್ಷಿಸಲಾಗಿದ್ದು, ಅವರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ.

ಇಂಡೋ – ಚೀನಾ ಗಡಿ ಬಳಿಯ ಶಿಪ್ಕಿ ಲಾ ಸೆಕ್ಟರ್‌ನಲ್ಲಿ ನಿಯೋಜಿತವಾಗಿದ್ದ ಸೇನಾ ಶಿಬಿರದ ಬಳಿ 16 ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಗಡಿ ಬಳಿ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿದ್ದ ಹಲವು ಯೋಧರನ್ನು ಈಗಾಗಲೇ ರಕ್ಷಿಸಲಾಗಿದೆ.

ಜಿಲ್ಲಾ ಪೊಲೀಸರ ನೆರವಿನೊಂದಿಗೆ ಇಂಡೋ-ಟಿಬೆಟಿಯನ್ ಪೊಲೀಸ್‌ ಪಡೆಯ 150 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಶೋಧ ಕಾರ್ಯ ನಡೆಸುತ್ತಿದೆ. (ಏಜೆನ್ಸೀಸ್)