More

    ಹೈನುಗಾರರಿಗೆ ಮತ್ತೆ ಬಂಪರ್

    ಚಿಕ್ಕಮಗಳೂರು: ಹಾಸನ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿನ ದರವನ್ನು ಒಂದು ತಿಂಗಳ ಅಂತರದಲ್ಲಿ ಎರಡೂ ಬಾರಿ ಹೆಚ್ಚಳ ಮಾಡಿದೆ.

    ಡಿ.19ರಂದು ರೈತರಿಂದ ಖರೀದಿಸುವ ಹಾಲಿನ ದರ ಲೀಟರ್​ಗೆ ಒಂದು ರೂ. ಏರಿಕೆ ಮಾಡಿದ್ದ ಒಕ್ಕೂಟ ಮತ್ತೆ ಬುಧವಾರ 1.50 ರೂ. ಏರಿಕೆ ಮಾಡಿದೆ. ಗುಣಮಟ್ಟದ ಲೀಟರ್ ಹಾಲಿಗೆ ರೈತರು 29.29ರೂ. ಪಡೆಯಲಿದ್ದಾರೆ. ರಾಜ್ಯದಲ್ಲಿಯೇ ಹಾಸನ ಹಾಲು ಒಕ್ಕೂಟ ಹೆಚ್ಚು ದರ ರೈತರಿಗೆ ನೀಡುತ್ತಿದೆ. ಇದರ ಜತೆ ಸರ್ಕಾರದ ಸಹಾಯಧನ 6 ರೂ. ದೊರೆಯಲಿದೆ.

    ಅತಿವೃಷ್ಟಿ-ಅನಾವೃಷ್ಟಿ ಅವಾಂತರ ಹಾಗೂ ಬೆಲೆ ಏರುಪೇರಿನೀಂದ ಸಣ್ಣ-ಅತಿ ಸಣ್ಣ ರೈತರು ಹೈನುಗಾರಿಕೆ ಉಪ ಕಸುಬನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಹಾಸನ ಒಕ್ಕೂಟದಿಂದ ಪ್ರತ್ಯೇಕಿಸಿ ಚಿಕ್ಕಮಗಳೂರಿನಲ್ಲಿ ಹಾಲು ಒಕ್ಕೂಟ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವ ಸಮಯದಲ್ಲಿಯೇ ಹಾಲಿನ ದರ ಏರಿಕೆಯಾಗಿದೆ. ಇದರಿಂದ ಹಲವು ರೈತರು ಹೈನುಗಾರಿಕೆಗೆ ಮರು ಹೋಗುವ ಸಾಧ್ಯತೆಗಳಿವೆ.

    ಹಾಸನ ಹಾಲು ಒಕ್ಕೂಟ 40 ಕೋಟಿ ರೂ. ಲಾಭ ಗಳಿಸಿದ್ದು, ಇದರಲ್ಲಿ 25 ಕೋಟಿ ರೂ.ವನ್ನು ಹಾಲು ದರ ಏರಿಸುವ ಮಾರ್ಗದಲ್ಲಿ ರೈತರಿಗೆ ನೀಡಲು ನಿರ್ಧರಿಸಿದೆ. ಜತೆಗೆ ಒಕ್ಕೂಟ ಜಾನುವಾರು ಹಾಗೂ ಸಾಕಣೆ ಮಾಡುವ ರೈತನಿಗೆ ವಿಮೆ ಮಾಡಿಸಲು ನಿರ್ಧರಿಸಿದೆ. ವಿಮೆಯ ಪ್ರೀಮಿಯಂನಲ್ಲಿ ಶೇ.40ರಷ್ಟು ರೈತ ಹಾಗೂ ಉಳಿದದ್ದನ್ನು ಒಕ್ಕೂಟ ಭರಿಸಲಿದೆ. ಆಕಸ್ಮಿಕ ಜಾನುವಾರು ಸಾವಿಗೆ 30-50 ಸಾವಿರ ರೂ. ಹಾಗೂ ರೈತರಿಗೆ ಎರಡು ಲಕ್ಷ ರೂ. ತನಕ ಪರಿಹಾರ ದೊರೆಯಲಿದೆ.

    ಹಾಲಿನ ಗುಣಮಟ್ಟ ಶೇ.3.60 ಫ್ಯಾಟ್ ಮತ್ತು ಶೇ.8.50 ಎಸ್​ಎನ್​ಎಫ್ ಇರಬೇಕು. ಇಂಥ ಮಾನದಂಡದ ಲೀಟರ್ ಹಾಲಿಗೆ 29.29 ರೂ. ಒಕ್ಕೂಟ ನೀಡಲಿದೆ. ನಿಗದಿತ ಪ್ರಮಾಣಕ್ಕಿಂತ ಶೇ.0.10 ರಷ್ಟು ಫ್ಯಾಟ್ ಜಾಸ್ತಿ ಇದ್ದರೆ ಒಕ್ಕೂಟ ರೈತರಿಗೆ 16 ಪೈಸೆ ಲೀಟರ್ ಒಂದಕ್ಕೆ ಹೆಚ್ಚುವರಿ ನೀಡಲಿದೆ.

    ಪ್ರಸ್ತುತ ಜಿಲ್ಲೆಯ ಹಾಲು ಶಿವಮೊಗ್ಗ, ಹಾಸನ, ಬೀರೂರು ಕೇಂದ್ರಗಳಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 240 ಹಾಲು ಉತ್ಪಾದಕ ಸಂಘಗಳಿದ್ದು, 12ರಿಂದ 13 ಸಾವಿರ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

    ಗುಣಮಟ್ಟದ ಹಾಲು ಖರೀದಿ ಹಾಗೂ ಕಲಬೆರಕೆ ತಡೆಯಲು ಒಕ್ಕೂಟ ಕಠಿಣ ಕ್ರಮಕೈಗೊಂಡಿದೆ. ಸಾಗಣೆ ವೆಚ್ಚ ಕಡಿಮೆಗೊಳಿಸಲು ಹಾಗೂ ಹಾಲಿನ ಗುಣಮಟ್ಟ ಕಾಪಾಡಲು ಮೂರು ಸಂಘಗಳಿಗೊಂದರಂತೆ ಬಲ್ಕ್ ಮಿಲ್ಕ್ ಕೋಲ್ಡ್ ಸ್ಟೋರೇಜ್ (ಬಿಎಂಸಿ) ಕೇಂದ್ರ ಒಕ್ಕೂಟ ಮಾಡುತ್ತಿದೆ. ಜಿಲ್ಲೆಯಲ್ಲಿ ಈಗ ನಾಲ್ಕೈದು ಕಡೆ ಬಿಎಂಸಿ ಮಾಡಲಾಗಿದೆ.

    ಕಲಬೆರಕೆ ಹಾಲಿನ ಕಪ್ಪು ಮಸಿ ಬಳಿದವರ ಮೇಲೆ ಕಠಿಣ ಕ್ರಮಕೈಗೊಂಡಿದ್ದ ಹಾಸನ ಹಾಲು ಒಕ್ಕೂಟ ಈಗ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆಯಲ್ಲದೆ, ರೈತರಿಗೂ ಉತ್ತಮ ಧಾರಣೆ ನೀಡುವ ಮೂಲಕ ಗಮನ ಸೆಳೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts