1.16 ಲಕ್ಷ ರೂ. ಮೌಲ್ಯದ ಮದ್ಯ ವಶ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಗೋವಾದಿಂದ ಮದ್ಯ ಖರೀದಿಸಿ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ 1.16 ಲಕ್ಷ ರೂ. ಮೌಲ್ಯದ 48.250 ಲೀ. ಮದ್ಯ ಹಾಗೂ 1 ಒಮ್ನಿ ವಶಪಡಿಸಿಕೊಂಡಿದ್ದಾರೆ.

ಪ್ರವೀಣ ಗುಂತಕಲ್ ಹಾಗೂ ಜ್ಞಾನರಾಜನ್ ಬಂಧಿತ ಆರೋಪಿಗಳು. ಒಮ್ನಿ ಕಾರ್ (ಕೆಎ 25, ಎಂ9058) ಮೂಲಕ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ

ಕೆ. ಮುರನಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಅಬಕಾರಿ ಆರಕ್ಷಕರಾದ ಜಾನ್ ವರ್ಗಿಸ್, ಎಸ್.ವಿ. ಕಮ್ಮಾರ, ಅನೀಲ ಶೀಲಭದ್ರ, ಆರ್.ಎ. ಸಿಂಗ್ ಮತ್ತು ವಾಹನ ಚಾಲಕರಾದ ಹೆಚ್ ಎಂ. ಚೌಧರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

ಚುನಾವಣೆ ಹಿನ್ನೆಲೆ ಕಟ್ಟೆಚ್ಚರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿ ತಯಾರಿಸುವ, ಸಾಗಣೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *